ಬೀದರ್: ದಿ.ಡಾ.ಗುರುಪಾದಪ್ಪ ನಾಗಮಾರಪಳ್ಳಿ ಶ್ರಮದಿಂದ ಬೀದರ್ ಡಿಸಿಸಿ ಬ್ಯಾಂಕ್ ಹೆಮ್ಮರವಾಗಿ ಬೆಳೆದಿದೆ. ಶತಮಾನೋತ್ಸವ ಹೊಸ್ತಿಲಲ್ಲಿ ಇರುವ ಬ್ಯಾಂಕ್ ಇನ್ನೂ ಹೆಚ್ಚು ಸೇವೆ ಒದಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಿ ಎಂದು ರಾಜ್ಯ ಸಹಕಾರ ಸಂಘಗಳ ನಿಬಂಧಕ ಎಸ್. ಜಿಯಾವುಲ್ ಸಲಹೆ ನೀಡಿದರು.
ನಗರದಲ್ಲಿ ಗುರುವಾರ ಕಲಬುರಗಿ ಮತ್ತು ಬೀದರ್ ಜಿಲ್ಲೆ ಪಿಕೆಪಿಎಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಶತಮಾನೋತ್ಸವಕ್ಕೆ ಹೆಚ್ಚಿನ ಅರ್ಥ ನೀಡುವ ಕೆಲಸ ಆಗಬೇಕು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರತಿ ಬದಲಾವಣೆಗಾಗಿ ಅಧಿಕಾರಿಗಳು ತರಬೇತಿ ಪಡೆಯಬೇಕು ಎಂದರು.
ರಾಷ್ಟ್ರೀಕೃತ ಬ್ಯಾಂಕ್ ಸೇವೆ ಅಧಿಕಾರಿಗಳ ಮೇಲೆ ಅವಲಂಬಿತವಾಗಿದ್ದರೆ ಸಹಕಾರಿ ಬ್ಯಾಂಕ್ ಸೇವೆ ಸ್ಥಳೀಯ ಆಡಳಿತ ಮಂಡಳಿ ಮೇಲೆ ನಿರ್ಭರವಿದೆ. ಹೀಗಾಗಿ ಸ್ಥಳೀಯ ಅವಶ್ಯಕತೆಗಳಿಗೆ ಸ್ಪಂದಿಸಲು ಸಹಕಾರಿ ಬ್ಯಾಂಕ್ಗಳಿಗೆ ಮಾತ್ರ ಸಾಧ್ಯವಿದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ, ಪ್ರಸ್ತುತ ಬ್ಯಾಂಕಿಂಗ್ ವ್ಯವಹಾರ ಅತ್ಯಂತ ಸ್ವರ್ಧಾತ್ಮಕವಾಗಿದೆ. ಜನರು ತ್ವರಿತ ಸೇವೆ ಅಪೇಕ್ಷಿಸುತ್ತಿದ್ದಾರೆ. ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಕಂಪ್ಯೂಟರೀಕೃತ ನಗದು ವ್ಯವಹಾರ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಅಪರ ನಿಬಂಧಕ ನಾರಾಯಣ ಮೂರ್ತಿ, ಜಂಟಿ ನಿಬಂಧಕ ಗೋಪಾಲ ಚವ್ಹಾಣ್, ಡಿಸಿಸಿ ಬ್ಯಾಂಕ್ ಸಿಇಒ ಮಹಾಜನ ಮಲ್ಲಿಕಾರ್ಜುನ, ಜಿಎಂ ಚನ್ನಬಸಯ್ಯ ಸ್ವಾಮಿ, ವಿಠಲರೆಡ್ಡಿ ಯಡಮಲ್ಲೆ, ಕಲಬುರಗಿ ಡಿಸಿಸಿ ಬ್ಯಾಂಕ್ ಸಿಇಒ ಚಿದಾನಂದ ನಿಂಬಾಲ್ಕರ್, ರಾಯಚೂರು ಡಿಸಿಸಿ ಬ್ಯಾಂಕ್ ನ ಐ.ಎಸ್. ಗಿರಡ್ಡಿ, ಉಪ ನಿಬಂಧಕ ಖುದ್ದುಸ್ ಇದ್ದರು. ಸಹಾರ್ದ ಸಂಸ್ಥೆಯ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಎಸ್.ಜಿ.ಪಾಟೀಲ್ ನಿರೂಪಣೆ ಮಾಡಿದರು.