ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಪ್ರಮಾಣ ದಿನೇದಿನೆ ಏರಿಕೆಯಾಗುತ್ತಿರುವ ಜತೆಗೆ ಸಾವಿನ ಪ್ರಕರಣಗಳೂ ಹೆಚ್ಚುತ್ತಿವೆ. ಈಗಾಗಲೇ 83 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ ಶತಕದ ಹೊಸ್ತಿಲಿನಲ್ಲಿದ್ದರೆ ಸೋಂಕಿತರ ಸಂಖ್ಯೆ 10 ಸಾವಿರದ ಸನಿಹದಲ್ಲಿದೆ.
ಲಾಕ್‌ಡೌನ್ ತೆರವು ಬಳಿಕ ಕರೊನಾ ಮರೆತಂತೆ ವರ್ತಿಸುತ್ತಿರುವ ಸಾರ್ವಜನಿಕರು ಎಲ್ಲಿಯೂ ನಿಯಮ ಪಾಲನೆ ಮಾಡುತ್ತಿಲ್ಲ. ತಹಸೀಲ್ದಾರ್ ಕಚೇರಿ, ನಗರಸಭೆ, ಪುರಸಭೆ ಕಚೇರಿಗಳು ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವ ನಿಯಮ ಗಾಳಿಗೆ ತೂರಲಾಗಿದೆ. ಸ್ಯಾನಿಟೈಸರ್ ವ್ಯವಸ್ಥೆ ಕಾಣದಂತಾಗಿದೆ. ಕೆಲವೊಂದು ಬ್ಯಾಂಕ್, ಆಸ್ಪತ್ರೆಗಳಲ್ಲಿ ಮಾತ್ರ ನಿಯಮ ಅನ್ವಯವಾಗುತ್ತಿದೆ.
1733 ಸೋಂಕಿತರಿಗೆ ಚಿಕಿತ್ಸೆ: ಜಿಲ್ಲೆಗೆ ಸಂಬಂಧಿಸಿದಂತೆ ಇದುವರೆಗೆ 8,033 ಕರೊನಾ ಪ್ರಕರಣ ದೃಢಪಟ್ಟಿವೆ. ಇದರಲ್ಲಿ 685 ಬೇರೆ ಜಿಲ್ಲೆ ಹಾಗೂ ಹೊರರಾಜ್ಯದ ಪ್ರಕರಣಗಳಾಗಿದ್ದು, 7,348 ಪ್ರಕರಣ ಗ್ರಾಮಾಂತರ ಜಿಲ್ಲೆ ನಿವಾಸಿಗಳದ್ದಾಗಿದೆ. 6217 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 1,733 ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಕರೊನಾ ಬುಲೆಟಿನ್‌ನಲ್ಲಿ ಮಾಹಿತಿ ದಾಖಲಿಸಿದೆ.
ಇದುವರೆಗೆ 45,160 ಮಂದಿಯನ್ನು ತಪಾಸಣೆಗೊಳಪಡಿಸಿದ್ದು, 8,033 ಮಂದಿಗೆ ಪಾಸಿಟಿವ್ ಬಂದಿದೆ. 35,946 ಮಂದಿಗೆ ನೆಗೆಟಿವ್ ಬಂದಿದ್ದು, 1181 ಮಂದಿಯ ವರದಿ ಬರಬೇಕಿದೆ.
ಐಸೋಲೇಷನ್ ಸೌಲಭ್ಯ ಕೇಂದ್ರಗಳು: ತಾಲೂಕುಗಳಲ್ಲೂ ಕರೊನಾ ಚಿಕಿತ್ಸೆಗಾಗಿ ಐಸೋಲೇಷನ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ದೊಡ್ಡಬಳ್ಳಾಪುರ, ಹೊಸಕೋಟೆ, ದೇವನಹಳ್ಳಿ, ನೆಲಮಂಗಲ ತಾಲೂಕು ಆಸ್ಪತ್ರೆ, ನೆಲಮಂಗಲದ ರಾಮಯ್ಯ ಹರ್ಷ ಆಸ್ಪತ್ರೆ, ವಿಪಿ ಮಗ್ನೂಸ್ ಆಸ್ಪತ್ರೆ, ಸಿದ್ಧಾರ್ಥ ಆಸ್ಪತ್ರೆ, ದೇವನಹಳ್ಳಿ ರಾಮಯ್ಯಲೀಲಾ ಆಸ್ಪತ್ರೆ, ಆಕಾಶ್ ಆಸ್ಪತ್ರೆ, ಹೊಸಕೋಟೆ ಎಂವಿಜೆ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆ ನೀಡುತ್ತಿವೆ.
ಕರೊನಾ ಅಂಕಿ ಅಂಶ ಗೊಂದಲ: ಜಿಲ್ಲಾಧಿಕಾರಿ ಸೂಚನೆ ಹೊರತಾಗಿಯೂ ಜಿಲ್ಲೆಯ ತಾಲೂಕುಗಳಲ್ಲಿ ಆರೋಗ್ಯ ಅಧಿಕಾರಿಗಳು, ತಹಸೀಲ್ದಾರ್‌ಗಳು ಕರೊನಾ ಬುಲೆಟಿನ್ ಬಿಡುಗಡೆ ಮಾಡುತ್ತಿರುವುದು ಜಿಲ್ಲೆಯಲ್ಲಿ ಗೊಂದಲ ಸೃಷ್ಟಿಸಿದೆ. ಜಿಲ್ಲೆಯ ಹೆಲ್ತ್ ಬುಲೆಟಿನ್ ಮಾಹಿತಿಯಂತೆ ಇದುವರೆಗೆ ಜಿಲ್ಲೆಯಲ್ಲಿ 83 ಸಾವಿನ ಪ್ರಕರಣ ದಾಖಲಾಗಿದ್ದಾರೆ. ದೊಡ್ಡಬಳ್ಳಾಪುರದ ಹೆಲ್ತ್ ಬುಲೆಟಿನ್ ಪ್ರಕಾರ ತಾಲೂಕಿನಲ್ಲೇ 75 ಮಂದಿ ಕರೊನಾ ಕಾರಣದಿಂದ ಮೃತಪಟ್ಟಿದ್ದಾರೆ. ಈ ಹಿಂದೆ ಜಿಲ್ಲಾ ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಹೆಲ್ತ್ ಬುಲೆಟಿನ್ ಹೊರತಾಗಿ ಮತ್ಯಾರು ಅಂಕಿ ಅಂಶಗಳ ಬಗ್ಗೆ ವರದಿ ಮಾಡದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ ನೀಡಿದ್ದರೂ ತಾಲೂಕುವಾರು ಹೆಲ್ತ್ ಬುಲೆಟಿನ್ ಬಿಡುಗಡೆಯಾಗುತ್ತಿರುವುದರಿಂದ ಜಿಲ್ಲಾ ಹೆಲ್ತ್‌ಬುಲೆಟಿನ್‌ಗೂ ತಾಲೂಕುವಾರು ಬುಲೆಟಿನ್‌ಗೂ ತಾಳೆಯಾಗುತ್ತಿಲ್ಲ. ಇದರಿಂದ ಸಾರ್ವಜನಿಕರು ಗೊಂದಲಕ್ಕೀಡಾಗಿದ್ದಾರೆ ಎನ್ನಲಾಗಿದೆ.
ಜಿಲ್ಲಾ ಹೆಲ್ತ್ ಬುಲೆಟಿನ್ ಹೊರತುಪಡಿಸಿ ಸ್ಥಳೀಯವಾಗಿ ಎಲ್ಲಿಯೂ ಕರೊನಾ ಅಂಕಿಅಂಶಗಳ ಪ್ರಕಟಣೆಗೆ ಅವಕಾಶವಿಲ್ಲ. ಇದೊಂದು ವ್ಯವಸ್ಥಿತ ಕ್ರಮ. ಈ ಬಗ್ಗೆ ಎಲ್ಲ ತಾಲೂಕು ವೈದ್ಯಾಧಿಕಾರಿಗಳು ಹಾಗೂ ತಹಸೀಲ್ದಾರ್‌ಗಳ ಸಭೆ ಕರೆದು ಮತ್ತೊಮ್ಮೆ ಸೂಚನೆ ನೀಡಲಾಗುವುದು. ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ