ಮೈಸೂರು: ರಾಷ್ಟ್ರೀಯ ಶಿಕ್ಷಣ ನೀತಿ-2020ರ ಜಾರಿಯಿಂದ ಭಾರತ ಗುಣಾತ್ಮಕ ಶಿಕ್ಷಣದೊಂದಿಗೆ, ಜ್ಞಾನದ ಶಕ್ತಿಶಾಲಿ ದೇಶವಾಗಿ ಪರಿವರ್ತಿತವಾಗಲಿದೆ ಎಂದು ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅಭಿಪ್ರಾಯಪಟ್ಟರು.
ನಗರದ ಬನ್ನಿಮಂಟಪದ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಲ್ಲಿ ಸೋಮವಾರ ಆಯೋಜಿಸಿದ್ದ 13ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು. ನವ ಶಿಕ್ಷಣ ನೀತಿ ಮೂಲಭೂತ ಕರ್ತವ್ಯ ಹಾಗೂ ಸಾಂವಿಧಾನಿಕ ಮೌಲ್ಯವನ್ನು ಸಮಾಜದಲ್ಲಿ ಬಿತ್ತಲಿದೆ. ಜ್ಞಾನ, ಕೌಶಲ, ಮಾನವ ಹಕ್ಕುಗಳು, ಸುಸ್ಥಿರ ಅಭಿವೃದ್ಧಿ ಹಾಗೂ ನೆಮ್ಮದಿಯ ಜೀವನ ಕಲ್ಪಿಸಿ ವಿಶ್ವಮಾನವನನ್ನಾಗಿ ಮಾಡಲಿದೆ. ಇದರೊಂದಿಗೆ, ಕಳೆದ 7 ದಶಕದಿಂದ ಮೆಕಾಲೆ ಶಿಕ್ಷಣ ಪದ್ಧತಿ ಮೂಲಕ ತಲೆಯಲ್ಲಿ ತುಂಬಿಕೊಂಡಿರುವ ಗುಲಾಮಿ ಮನಸ್ಥಿತಿಯನ್ನು ಸಂಪೂರ್ಣ ತೊಡೆದು ಹಾಕಲಿದೆ ಎಂದು ಹೇಳಿದರು.
ಶಿಕ್ಷಣ ನೀತಿ ವಿದ್ಯಾರ್ಥಿಗಳಿಗೆ ಪೂರಕವಾಗಿದ್ದು, ಇಂದಿನ ಶಿಕ್ಷಣ ಯುಗಕ್ಕೆ ಅನುಕೂಲವಾಗಿದೆ. ಎಲ್ಲರಿಗೂ ಗುಣಮಟ್ಟದ ಮತ್ತು ಸಮಾನ ಶಿಕ್ಷಣ ನೀಡುವ ಉದ್ದೇಶ ಈ ನೀತಿಯಲ್ಲಿದೆ. ಇದು ಭಾರತವನ್ನು ಜಾಗತಿಕ ಜ್ಞಾನ ಹೊಂದಿದ ಸೂಪರ್‌ಪವರ್ ರಾಷ್ಟ್ರವನ್ನಾಗಿ ಮಾಡುವುದರಲ್ಲಿ ಅನುಮಾನವಿಲ್ಲ ಎಂದರು.
ದೇಶದ ಶಿಕ್ಷಣ ವ್ಯವಸ್ಥೆ ಸದೃಢವಾಗಿದ್ದ ಕ್ರಿ.ಶ.1ರಿಂದ 1000ದವರೆಗಿನ ಕಾಲದಲ್ಲಿ ಭಾರತ ವಿಶ್ವದ ಜಿಡಿಪಿಯಲ್ಲಿ ಶೇ.34ರಷ್ಟು ಪಾಲನ್ನು ಹೊಂದಿತ್ತು. 2004ರಲ್ಲಿ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆಯ (ಒಇಸಿಡಿ) ವರದಿಯಲ್ಲಿ ಅರ್ಥಶಾಸ್ತ್ರಜ್ಞ ಪ್ರೊ.ಆ್ಯಂಗಸ್ ಮ್ಯಾಡಿಸನ್ ಈ ಬಗ್ಗೆ ಹೇಳಿದ್ದರು. ಕಳೆದ ಸಾವಿರ ವರ್ಷಗಳಲ್ಲಿ ನಮ್ಮ ಅರ್ಥವ್ಯವಸ್ಥೆ, ಶಿಕ್ಷಣ ವ್ಯವಸ್ಥೆಯನ್ನು ಹೊರಗಿನ ಶಕ್ತಿಗಳು ಅತಿಕ್ರಮಿಸಿದ್ದವು. ಪ್ರಾಚೀನ ಭಾರತ ಕಾಲದಲ್ಲಿದ್ದ ನಳಂದ, ವಿಕ್ರಮಶಿಲಾದಂತಹ ಶ್ರೇಷ್ಠ ವಿಶ್ವವಿದ್ಯಾಲಯಗಳಿಗೆ ವಿದೇಶದಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದರು. ಈ ಪಾರಂಪರಿಕ ಶಿಕ್ಷಣ ವ್ಯವಸ್ಥೆಯನ್ನು ಬ್ರಿಟಿಷರು ಹಾಳು ಮಾಡಿದರು ಎಂದು ಕಳವಳ ವ್ಯಕ್ತಪಡಿಸಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ, ಕುಲಪತಿ ಡಾ.ಸುರೀಂದರ್ ಸಿಂಗ್, ಪ್ರೊ.ಚಾನ್ಸಲರ್ ಡಾ.ಬಿ.ಸುರೇಶ್, ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ ಮಠ, ಕುಲಸಚಿವ ಡಾ.ಬಿ.ಮಂಜುನಾಥ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಆರ್.ಸುಧೀಂದ್ರ ಭಟ್ ಪಾಲ್ಗೊಂಡಿದ್ದರು.