ಚಿಕ್ಕಬಳ್ಳಾಪುರ : ನಂದಿ ಗಿರಿಧಾಮವನ್ನು ನೋಡಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ ಶಕ್ತಿಧಾಮ ಶಾಲೆಯ ಮಕ್ಕಳನ್ನು ಸ್ವತಃ ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಕರೆದುಕೊಂಡು ಬಂದು ಪ್ರವಾಸಿ ತಾಣವನ್ನು ತೋರಿಸಿ ಖುಷಿಪಡಿಸಿದರು.
ನಟ ಡಾ.ರಾಜ್ ಕುಮಾರ್ ಕುಟುಂಬದ ನೇತೃತ್ವದಲ್ಲಿ ನಡೆಯುತ್ತಿರುವ ಶಕ್ತಿಧಾಮ ಶಾಲೆಯ ವಿದ್ಯಾರ್ಥಿಗಳು ಬೆಂಗಳೂರು ಸೇರಿ ಸುತ್ತಲಿನ
ಪ್ರದೇಶದ ಶೈಕ್ಷಣಿಕ ಪ್ರವಾಸ ಕೈಗೊಂಡಿದ್ದಾರೆ. ಇದರ ನಡುವೆ ಅನೇಕರು ನಂದಿ ಗಿರಿಧಾಮದ ವೀಕ್ಷಣೆಯ ಆಸೆಯನ್ನು ನಟ ಶಿವರಾಜ್
ಕುಮಾರ್ ಎದುರು ಹೇಳಿಕೊಂಡಿದ್ದಾರೆ. ಇದಕ್ಕೆ ಗುರುವಾರ ಬೆಳಗ್ಗೆ ಪುರಾಣ ಪ್ರಸಿದ್ಧ ನಂದಿಯ ಶ್ರೀ ಭೋಗನಂದೀಶ್ವರ ದೇವಸ್ಥಾನ ಹಾಗೂ
ನಂದಿ ಗಿರಿಧಾಮಕ್ಕೆ ಮಕ್ಕಳನ್ನು ಕರೆದುಕೊಂಡು ಬರಲಾಯಿತು.
ನಂದಿ ಗಿರಿಧಾಮದಲ್ಲಿ ಟಿಪ್ಪು ಡ್ರಾಪ್, ಗಾಂಧಿ ನಿಲಯವನ್ನು ವೀಕ್ಷಿಸಿದ ಬಳಿಕ ಬೆಟ್ಟದ ತಪ್ಪಲಿನಲ್ಲಿನ ಶ್ರೀ ಭೋಗ ನಂದೀಶ್ವರ ಸ್ವಾಮಿ
ದೇವಾಲಯಕ್ಕೆ ಭೇಟಿ ನೀಡಲಾಯಿತು.
ಶಿವರಾಜ್ ಕುಮಾರ್ ದಂಪತಿ ಮಕ್ಕಳೊಂದಿಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಆವರಣದಲ್ಲಿ ಎಲ್ಲರ ಜತೆಗೂಡಿ ತಿಂಡಿ
ಸೇವಿಸಿದರು. ಇದೇ ವೇಳೆ ಶಕ್ತಿಧಾಮದ ವಿದ್ಯಾರ್ಥಿನಿಯರು ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಕೈ ತುತ್ತು ಸವಿದರು.
ಬಳಿಕ ಉದ್ಯಾನದಲ್ಲಿ ಮಕ್ಕಳು ನಟ ಪುನೀತ್ ರಾಜ್ ಕುಮಾರ್ ಸಿನಿಮಾ ಹಾಡುಗಳನ್ನು ಹಾಡಿ ಖುಷಿಪಟ್ಟರು.
ಕೆಲಸದ ಒತ್ತಡದ ನಡುವೆ ಖುಷಿ ಸಿಗುತ್ತೆ : ಶಕ್ತಿಧಾಮ ಮಕ್ಕಳ ಜತೆಗೆ ಕಾಲ ಕಳೆಯಲು ಖುಷಿಯಾಗುತ್ತದೆ. ಇದಕ್ಕೆ ಕೆಲಸದ ಒತ್ತಡದ ನಡುವೆಯೂ ನಿರಂತರವಾಗಿ ಮಕ್ಕಳೊಂದಿಗೆ ಬೆರೆಯುತ್ತೇವೆೆ ಎಂದು ಶಿವರಾಜ್ ಕುಮಾರ್ ತಿಳಿಸಿದರು. ನಮ್ಮ ತಂದೆ, ತಾಯಿ ಹಾಗೂ ಕೆಂಪಯ್ಯನವರು ಆರಂಭಿಸಿದ ಸಂಸ್ಥೆಯೇ ಶಕ್ತಿಧಾಮ. ಇಲ್ಲಿ ಹಿಂದೆ 150 ಮಂದಿ ಮಕ್ಕಳಿದ್ದರು. ಪ್ರಸಕ್ತ ಸಾಲಿನಲ್ಲಿ ಸಂಖ್ಯೆ 200ಕ್ಕೇರಲಿದೆ. ಊಟ, ಮೂಲ ಸೌಕರ್ಯ ಒದಗಿಸುವುದರ ಜತೆಗೆ ವಸತಿ ಶಾಲೆ ನಿರ್ವಹಣೆಯ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಇಲ್ಲಿಗೆ ಬರಲು ಖುಷಿ : ನಂದಿ ಗಿರಿಧಾಮದೊಂದಿಗೆ ನಮ್ಮ ಕುಟುಂಬದ ಸದಸ್ಯರು ಭಾವುಕ ಸಂಬಂಧ ಹೊಂದಿದ್ದಾರೆ. ಅಪ್ಪಾಜಿ, ನಾನು, ಪುನೀತ್ ರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಸಹ ಸಿನಿಮಾ ಶೂಟಿಂಗ್‌ಗೆ ಹಲವು ಬಾರಿ ಬಂದು, ಇಲ್ಲಿನ ಒಳ್ಳೆಯ ವಾತಾವರಣವನ್ನು ಸವಿದಿದ್ದು ಇಲ್ಲಿಗೆ ಬರಲು ಖುಷಿಯಾಗುತ್ತದೆ ಎಂದ ಶಿವರಾಜ್‌ಕುಮಾರ್, ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆ ಸಿನಿಮಾ ಜೇಮ್ಸ್‌ಗೆ ವಾಯ್ಸ ಡಬ್ಬಿಂಗ್ ಮುಗಿದಿದೆ. ಇದು ನಿಜವಾಗಲೂ ಕಷ್ಟವಾಯಿತು. ಅವನನ್ನು ಎಲ್ಲರೂ ಮಿಸ್ ಮಾಡಿಕೊಂಡಿದ್ದಾರೆ ಎಂದರು.