ಜಿಲ್ಲೆ

ಶಕ್ತಿ ಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲ:ಸಚಿವ ಪರಮೇಶ್ವರ್ ಸ್ಪಷ್ಟನೆ

ಹಾಸನ: ಶಕ್ತಿ ಯೋಜನೆ ಪ್ರಣಾಳಿಕೆ ಬರೆದವನೇ ನಾನು. ಪ್ರಣಾಳಿಕೆಯಲ್ಲಿ ಐದು ಗ್ಯಾರೆಂಟಿಗಳನ್ನು ಐದು ವರ್ಷವೂ ಕೂಡ ಅನುಷ್ಠಾನ ಮಾಡುತ್ತೇನೆ ಅಂತ ಹೇಳಿದ್ದೇವೆ. ಅದರಂತೆ ಐದು ವರ್ಷಗಳು ಕೂಡ ಐದು ಗ್ಯಾರೆಂಟಿಗಳನ್ನು ನೀಡುತ್ತೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದರು.

ಗುರುವಾರ ಸಂಜೆ ಹಾಸನಾಂಬೆ ದೇವಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಅನೇಕ ಸಂದರ್ಭದಲ್ಲಿ ವಿರೋಧ ಪಕ್ಷದವರು ಗ್ಯಾರೆಂಟಿ ನಿಲ್ಲಿಸುತ್ತಾರೆ ಅಂತ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು, ನಾವು ಸ್ಪಷ್ಟನೆ ನೀಡಿದ್ದೇವೆ. ಯಾವುದೇ ಕಾರಣಕ್ಕೂ ನಾವು ನಮ್ಮ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಐದು ಗ್ಯಾರಂಟಿಗಳು ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದರು.

ಡಿಸಿಎಂ ಶಿವಕುಮಾರ್ ಅವರು ಶಕ್ತಿ ಯೋಜನೆ ಬಗ್ಗೆ ಹೇಳಿರುವುದೇ ಬೇರೆ. ಎಂಎನ್‌ಸಿ ಕಂಪನಿ, ಐಟಿ-ಬಿಟಿಯಲ್ಲಿ ಕೆಲಸ ಮಾಡುವವರಿಗೆ ಉಚಿತ ಬಸ್ ಪ್ರಯಾಣ ಬೇಡ ಎಂದು ಹೇಳಿದ್ದರು. ಅದನ್ನು ಬೇರೆ ರೀತಿ ಅರ್ಥೈಸಲಾಗಿದೆ. ಅವರು ಕೂಡ ಶಕ್ತಿ ಯೋಜನೆ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈ ವಿಷಯವಾಗಿ ಸರ್ಕಾರದಲ್ಲಿ ಯಾವುದೇ ಚರ್ಚೆ ಮಾಡಿಲ್ಲ. ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ, ತೆಗೆದುಕೊಳ್ಳುವುದೂ ಇಲ್ಲ. ಮಾರ್ಪಾಡಾಗಲಿ, ಮರುವೀಕ್ಷಣೆ, ಪರಿಷ್ಕರಣೆ ಆಗಲಿ ಯಾವುದೇ ಶಬ್ದದ ಬಗ್ಗೆಯೂ ಚರ್ಚೆ ಆಗಿಲ್ಲ ಎಂದು ಹೇಳಿದರು.

ನಾನು ಬಹಳ ಸೂಕ್ಷ್ಮವಾಗಿ ಉಪಮುಖ್ಯಮಂತ್ರಿ ಹೇಳಿಕೆ ಗಮನಿಸಿದ್ದೇನೆ. ಅವರು ಯೋಜನೆ ನಿಲ್ಲಿಸುತ್ತೇವೆ ಅಥವಾ ಮಾರ್ಪಾಟು ಮಾಡುತ್ತೇವೆ ಅಂಥ ಹೇಳಿಲ್ಲ. ಇದು ಸರ್ಕಾರದ ನಿರ್ಧಾರ, ವೈಯಕ್ತಿಕ ನಿರ್ಧಾರ ಅಲ್ಲ. ನನ್ನ ಯಾವುದೋ ಒಂದು ಅಭಿಪ್ರಾಯ ಇರಬಹುದು. ಆದರೆ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ. ಟಿವಿ, ಪೇಪರ್‌ಗಳ ಈ ಹೇಳಿಕೆ ಸಂಬಂಧ ಎಐಸಿಸಿ ಅಧ್ಯಕ್ಷರೇ ಕೇಳಿದ್ದಕ್ಕೆ ಡಿಸಿಎಂ ಇಲ್ಲ ಎಂದು ಹೇಳಿದ್ದಾರೆ. ಈಗ ನಾನು ಹೇಳುತ್ತಿದ್ದೇನೆ. ಆ ರೀತಿಯ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದರು.

ದರ್ಶನ ಭಾಗ್ಯ ದೊರಕಿದ್ದು ಪುಣ್ಯ

ಇಂದು ನನಗೆ ಮತ್ತು ನನ್ನ ಶ್ರೀಮತಿಗೆ ಹಾಸನಾಂಬ ದೇವಿಯ ದರ್ಶನ ಭಾಗ್ಯ ದೊರಕಿದ್ದು ನಮ್ಮ ಪುಣ್ಯ ಎಂದು ಭಾವಿಸುತ್ತೇನೆ. 4-5 ವರ್ಷದ ಹಿಂದೆ ದೇವಿಯ ದರ್ಶನ ಪಡೆದಿದ್ದೆ. ನಿಗೂಢವಾದ ವಿಚಾರದಲ್ಲಿ ನಾವೆಲ್ಲರೂ ತಾಯಿಯನ್ನು ಭಕ್ತಿಯಿಂದ ಪೂಜೆ ಮಾಡುತ್ತೆವೆ. ಮೂರು ವರ್ಷದ ಹಿಂದೆ ಇದ್ದ ಭಕ್ತರ ಸಂಖ್ಯೆ ಇಂದು ಮೂರು ಪಟ್ಟು ಹೆಚ್ಚಿದೆ. ಪ್ರತಿದಿನ ಲಕ್ಷಾಂತರ ಮಂದಿ ದೇವಿ ದರ್ಶನ ಪಡೆಯುತ್ತಿದ್ದಾರೆ ಎಂದು ಜಿ. ಪರಮೇಶ್ವರ್ ತಿಳಿಸಿದರು.

ಜನರು ಆತ್ಮವಿಶ್ವಾಸ, ನಂಬಿಕೆಯಿಂದ ಹಿಂದು ಸಂಪ್ರದಾಯದಂತೆ ಭಕ್ತಿ ಇಟ್ಟುಕೊಂಡಿದ್ದಾರೆ. ರಾಜ್ಯದಿಂದ ಅಷ್ಟೇ ಅಲ್ಲದೇ ಪಕ್ಕದ ರಾಜ್ಯದಿಂದಲೂ ಸಹಸ್ರಾರು ಭಕ್ತರು ಆಗಮಿಸಿ ಹಾಸನಾಂಬ ದರ್ಶನ ಪಡೆಯುತ್ತಿದ್ದಾರೆ. ವಿಶೇಷವಾಗಿ ಮಹಿಳೆಯರು ಮಕ್ಕಳೊಂದಿಗೆ ಸಾಲಿನಲ್ಲಿ ನಿಂತು ದರ್ಶನ ಪಡೆಯುವುದು ನೋಡಿಕೊಂಡು ಬಂದೆ. ಈ ಬಾರಿ 3 ಪಟ್ಟು ಜನ ಬಂದಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಜಾತ್ರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಿರುವುದಕ್ಕೆ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ದೊಡ್ಡ ಉತ್ಸವದಲ್ಲಿ ಸಣ್ಣಪುಟ್ಟ ಘಟನೆ ನಡೆಯುವುದು ಸಹಜ. ಅದನ್ನು ನಿಭಾಯಿಸಬೇಕಾಗುತ್ತದೆ. ಇನ್ನು ಎರಡು ದಿನಗಳು ದರ್ಶನಕ್ಕೆ ಬಾಕಿ ಇದ್ದು ಸೂಕ್ತ ಬಂದೋಬಸ್ತ್‌ಗೆ ಐಜಿಗೆ ಸೂಚನೆ ಕೊಡಲಾಗಿದೆ. ಬಂದು ಹೋಗುವ ಭಕ್ತರಿಗೆ ನಿರಾಸೆ ಆಗದಂತೆ ಅಗತ್ಯ ಸೌಲಭ್ಯ ಒದಗಿಸಲು ಅಧಿಕಾರಿಗಳು ಎಚ್ಚರಿಕೆ ವಹಿಸಿ ಜನರಿಗೆ ತೊಂದರೆ ಆಗದಂತೆ ಸೂಕ್ತ ಸೌಲಭ್ಯ ಒದಗಿಸುವಂತೆ ನಿರ್ದೇಶನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹಾಸನಾಂಬ ಜಾತ್ರೆಯನ್ನು ಇನ್ನೂ ವ್ಯವಸ್ಥಿತವಾಗಿ ಅಚ್ಚಕಟ್ಟಾಗಿ ಮಾಡಲು ಸರ್ಕಾರ ಕ್ರಮಕೈಗೊಳ್ಳಲಿದೆ. ನಾಡಿನ ಜನ ಸಮುದಾಯಕ್ಕೆ ಶಾಂತಿ ನೀಡುವಂತೆ ದೇವಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ತಿಳಿಸಿದರು.

ಲೋಕಸಭಾ ಸದಸ್ಯರಾದ ಶ್ರೇಯಸ್ ಪಟೇಲ್, ಐಜಿ ಬೋರಲಿಂಗಯ್ಯ, ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಮತ್ತಿತರರು ಹಾಜರಿದ್ದರು.