ಕೊಳ್ಳೇಗಾಲ: ರಾಜ್ಯದ ಸರ್ಕಾರದ ಶಕ್ತಿ ಯೋಜನೆಯಡಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ 500 ಕೋಟಿ ಉಚಿತ ಪ್ರಯಾಣ ದಾಖಲೆ ಹಿನ್ನೆಲೆಯಲ್ಲಿ ಸೋಮವಾರ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸಿಹಿ ಹಂಚಿದರು.
ಈ ವೇಳೆ ಮಾತನಾಡಿ, ಶಕ್ತಿ ಯೋಜನೆ ಯಶಸ್ವಿಯಾಗಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ 500 ಕೋಟಿಗೂ ಪ್ರಯಾಣ ದಾಖಲಾಗಿದ್ದು ಇದಕ್ಕೆ 12,669 ಕೋಟಿ ರೂ.ಗಳನ್ನು ಸರ್ಕಾರ ಸಾರಿಗೆ ಇಲಾಖೆಗೆ ನೀಡಿದೆ. ಚಾಮರಾಜನಗರ ಜಿಲ್ಲೆಯಲ್ಲಿ 10 ಕೋಟಿ ಪ್ರಯಾಣ ದಾಖಲಾಗಿದೆ. ಸರ್ಕಾರ 369 ಕೋಟಿ ರೂ. ಅನುದಾನವನ್ನು ಸಾರಿಗೆ ಇಲಾಖೆ ಭರಿಸಿದೆ ಎಂದರು.
ತಮಿಳುನಾಡಿನಲ್ಲಿ ಮಹಿಳೆಯರಿಗೆ ಪಿಂಕ್ ಬಸ್ ವ್ಯವಸ್ಥೆಯಿದೆ. ಅದರಂತೆ, ರಾಜ್ಯದಲ್ಲೂ ಮಹಿಳೆಯರಿಗೆ ಪ್ರತ್ಯೇಕವಾಗಿ ಹಸಿರು ಬಸ್ ಬಿಡಬೇಕೆಂದು ಮನವಿ ಮಾಡಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ ಕುಂತೂರು ಮೋಳೆ, ನಗರಸಭೆ ಅಧ್ಯಕ್ಷೆ ರೇಖಾ, ಸದಸ್ಯರು, ಉಪವಿಭಾಗಾಧಿಕಾರಿ ಮಹೇಶ್, ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಬೋಗನಾಯಕ ಇದ್ದರು.