ಜಿಲ್ಲೆ

ಶಕ್ತಿ ಯೋಜನೆ ರದ್ದತಿಗೆ ಆಗ್ರಹ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಸರ್ಕಾರದ ಶಕ್ತಿ ಯೋಜನೆ ಖಂಡಿಸಿ ಧಾರವಾಡ ಆಟೋ ರಿಕ್ಷಾ ಚಾಲಕರ ಅಭಿವೃದ್ಧಿ ಸಂಘ, ಟಾಟಾ ಮ್ಯಾಜಿಕ್ ಪ್ಯಾಸೆಂಜರ್ ಚಾಲಕರ ಒಕ್ಕೂಟ ವತಿಯಿಂದ ಬಂದ್ ಆಚರಿಸುವ ಮೂಲಕ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಕಲಾಭವನದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಚಾಲಕರು, ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಪ್ರತಿಭಟಿಸಿದರು.
ಶಕ್ತಿ ಯೋಜನೆ ಜಾರಿಯಾದ ದಿನದಿಂದ ಜನರು ಆಟೋಗಳಲ್ಲಿ ಪ್ರಯಾಣಿಸುವುದು ಕಡಿಮೆಯಾಗಿದೆ. ಇದರಿಂದ ಆಟೋ ಚಾಲಕರ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ನಗರ ವ್ಯಾಪ್ತಿಯಲ್ಲಿ ಯೋಜನೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಸರ್ಕಾರ ಶಕ್ತಿ ಯೋಜನೆ ಅಡಿ ನಗರ ಸಾರಿಗೆ 25 ಕಿ.ಮೀ ಬಿಟ್ಟುಕೊಡಬೇಕು. ಇಲ್ಲವೇ ಆಟೋ ಚಾಲಕರಿಗೆ ಪ್ರತಿ ತಿಂಗಳು 10 ಸಾವಿರ ರೂ. ನೀಡಬೇಕು. ಚಾಲಕರಿಗೆ ನಿಗಮ ಮಂಡಳಿ ರಚನೆ, ಚಾಲಕರ ಮಕ್ಕಳಿಗೆ ಎಲ್‌ಕೆಜಿಯಿಂದ ಉನ್ನತ ಶಿಕ್ಷಣವರೆಗೆ ಸರ್ಕಾರ ಉಚಿತ ಶಿಕ್ಷಣ ನೀಡಬೇಕು ಸೇರಿ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರ ತ್ವರಿತವಾಗಿ ಬೇಡಿಕೆ ಈಡೇರಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಪತ್ರ ರವಾನಿಸಿದರು.
ಜೀವನ ಹುತ್ಕುರಿ, ವಿ.ಬಿ. ಸಂಜೀವಪ್ಪನವರ, ಲಕ್ಷ್ಮಣ ಜಮನಾಳ, ಗೌಸ ಕಿತ್ತೂರ, ರಜಾಕ್ ಹಂಚಿನಮನಿ, ಸುರೇಶ ರಾಠೋಡ, ನೂರ ಅಹ್ಮದ್ ಮಾಗಡಿ, ಕೈಲಾಶ ಕಟ್ಟಿಮನಿ, ಪ್ರಕಾಶ ಗಡಾದ, ಇತರರು ಇದ್ದರು.