ಜಿಲ್ಲೆ

'ಶಕ್ತಿ' ಯೋಜನೆ ಖಂಡಿಸಿ ಆಟೋ ಚಾಲಕರಿಂದ ಬೆಂಗಳೂರು ಚಲೋ

ಮೈಸೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮಹಿಳೆಯರ ಉಚಿತ ಬಸ್ ಯೋಜನೆ ‘ಶಕ್ತಿ’ ಜಾರಿಯಿಂದ ಆಟೋ, ಕ್ಯಾಬ್, ಟ್ಯಾಕ್ಸಿ, ಖಾಸಗಿ ಬಸ್ ಚಾಲಕರು, ಮಾಲೀಕರು ಸಂಕಷ್ಟದಲ್ಲಿದ್ದು, ಪರಿಹಾರ ನೀಡುವಂತೆ ಒತ್ತಾಯಿಸಿ ಸಂಯುಕ್ತ ಕರ್ನಾಟಕ ಆಟೋರಿಕ್ಷಾ ಚಾಲಕರು ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದಿಂದ ‘ಬೆಂಗಳೂರು ಚಲೋ’ಗೆ ಚಾಲನೆ ನೀಡಲಾಯಿತು.
ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಪೂಜೆ ನೆರವೇರಿಸಿ, ರಾಜ್ಯಾದ್ಯಂತ ಸಾರ್ವಜನಿಕ ಸೇವೆಯಲ್ಲಿರುವ ಆಟೋ, ಕ್ಯಾಬ್, ಟ್ಯಾಕ್ಸಿ, ಖಾಸಗಿ ಬಸ್ ಚಾಲಕರು, ಮಾಲೀಕರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಅವರ ನೆರವಿಗೆ ನಿಲ್ಲಬೇಕು ಎಂದು ಆಗ್ರಹಿಸಿದರು.
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿರುವುದರಿಂದ ಖಾಸಗಿ ಬಸ್‌ಗಳ ಚಾಲಕರು, ನಿರ್ವಾಹಕರು, ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಟೋ, ಟ್ಯಾಕ್ಸಿಗಳನ್ನು ಸಾಲ ಮಾಡಿ ಕೊಂಡುಕೊಂಡಿರುವ ಚಾಲಕರು ಬ್ಯಾಂಕ್‌ಗೆ ಬಡ್ಡಿ ಕಟ್ಟಲಾಗದ ಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ಬಡ್ಡಿ ಮನ್ನಾ ಮಾಡುವ ಮೂಲಕ ನಮ್ಮ ನೆರವಿಗೆ ನಿಲ್ಲಬೇಕು ಎಂದು ಒತ್ತಾಯಿಸಿದರು.
ಅಸಂಘಟಿತ ಕಾರ್ಮಿಕರಾದ ಆಟೋ, ಖಾಸಗಿ ವಾಣಿಜ್ಯ ವಾಹನಗಳ ಚಾಲಕರು, ಖಾಸಗಿ ಬಸ್‌ಗಳ ಚಾಲಕರು, ಎಲೆಕ್ಟ್ರೀಷಿಯನ್, ಮೆಕಾನಿಗಳು ಸೇರಿದಂತೆ ಇದನ್ನೇ ನಂಬಿ ಬದುಕುವ ಕಾರ್ಮಿಕರ ಕಲ್ಯಾಣಕ್ಕೆ ಸಾರಿಗೆ ಇಲಾಖೆಯಡಿ ನಿಗಮ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದರು.
ಉಬರ್, ರ‌್ಯಾಪಿಡೊ, ಬೈಕ್ ಟ್ಯಾಕ್ಸಿಗಳಿಂದಲೂ ನಮಗೆ ತೊಂದರೆ ಅಗಿದೆ. ಇವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಅಪಘಾತ, ದುರ್ಘಟನೆ ಸಂಭವಿಸಿದಾಗ 10 ಲಕ್ಷ ರೂ. ಸಹಾಯಧನ ನೀಡುವುದರ ಜತೆಗೆ ಭವಿಷ್ಯನಿಧಿಯಡಿ ಕಾರ್ಮಿಕರನ್ನು ನೋಂದಾಯಿಸಿ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸಬೇಕು. ಪ್ರಯಾಣಿಕರಿಗಾಗಿ ಕಾಯುತ್ತಿದ್ದರೂ ಸಂಚಾರ ಪೊಲೀಸರು ದಂಡ ಹಾಕುತ್ತಿದ್ದು, ಇದನ್ನು ತಡೆಯಬೇಕು. ಪೊಲೀಸರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಆಟೋ ಚಾಲಕ ಸಮೀವುಲ್ಲಾ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಬೇಕು. ಚಾಲನ ಪರವಾನಗಿ ಪತ್ರಗಳ ನವೀಕರಣಕ್ಕೆ ವಿಳಂಬವಾಗುತ್ತಿದ್ದು, ಲಂಚಕ್ಕೆ ಒತ್ತಾಯ ಮಾಡುತ್ತಾರೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಬಗೆಹರಿಸಬೇಕು. ಮೈಸೂರಿನಲ್ಲಿ ಈಗಾಗಲೇ ಆಟೋ ಸಂಖ್ಯೆ ಹೆಚ್ಚಾಗಿದ್ದು, ನಿಲ್ಲಿಸಲು ಸ್ಥಳಾವಕಾಶವೇ ಇಲ್ಲ. ಹೀಗಾಗಿ ಮುಂದಿನ 5 ವರ್ಷ ಆಟೋಗಳಿಗೆ ಪರವಾನಗಿ ನೀಡಬಾರದು ಎಂದು ಒತ್ತಾಯಿಸಿದರು.
ಪ್ರತಿಭಟನೆ ಬಳಿಕ ಆಟೋರಿಕ್ಷಾ ಚಾಲಕರ ನಿಯೋಗ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು 20ಕ್ಕೂ ಹೆಚ್ಚು ಆಟೋಗಳಲ್ಲಿ ಬೆಂಗಳೂರಿಗೆ ತೆರಳಿದರು.
ಸಂಘದ ಅಧ್ಯಕ್ಷ ಎಂ.ವಿ.ಶ್ರೀನಿವಾಸ ಮಿತ್ರ, ಪ್ರಧಾನ ಕಾರ್ಯದರ್ಶಿ ಪಿ. ಸುನಿಲ್‌ಕುಮಾರ್, ಕಾರ್ಯಾಧ್ಯಕ್ಷ ಎಂ.ಎಚ್.ಕಿರಣ್, ಕರ್ನಾಟಕ ಕಾವಲುಪಡೆ ರಾಜ್ಯಾಧ್ಯಕ್ಷ ಎಂ.ಮೋಹನ್‌ಕುಮಾರ್‌ಗೌಡ, ಕರ್ನಾಟಕ ಕನ್ನಡ ವೇದಿಕೆ ಅಧ್ಯಕ್ಷ ಸುರೇಶ್ ಬಾಬು ಇತರರು ಇದ್ದರು.