ಮಂಡ್ಯ: ಭಾರತ್ ಜೋಡೋ ಯಶಸ್ಸಿನ ನಂತರ ಮಂಡ್ಯ ಜಿಲ್ಲೆಯಲ್ಲಿ ನಡೆಯಲಿರುವ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಇದರೊಂದಿಗೆ ಜೆಡಿಎಸ್, ಬಿಜೆಪಿ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಕೈ ನಾಯಕರು ಸಜ್ಜಾಗಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ನಡೆಯುತ್ತಿರುವ ಪ್ರಜಾಧ್ವನಿ ಯಾತ್ರೆ ಜ.27ರಂದು ಮಂಡ್ಯಕ್ಕೆ ಆಗಮಿಸಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಘಟಾನುಘಟಿ ನಾಯಕರು ಭಾಗಿಯಾಗಲಿದ್ದಾರೆ. ಶಕ್ತಿ ಪ್ರದರ್ಶನದ ಸಮಾವೇಶಕ್ಕೆ ನಗರದ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಬೆಳಗ್ಗೆ 11 ಗಂಟೆಗೆ ಸಮಾವೇಶಕ್ಕೆ ಚಾಲನೆ ಸಿಗಲಿದೆ.
ಮಹತ್ವದ ಸಮಾವೇಶ: ಜಿಲ್ಲೆಯಲ್ಲಿ ನಡೆಯಲಿರುವ ಸಮಾವೇಶ ಹೆಚ್ಚು ಮಹತ್ವ ಪಡೆದುಕೊಂಡಿದೆ. ಕೆಪಿಸಿಸಿ ಉಪಾಧ್ಯಕ್ಷರಾದ ಎನ್.ಚಲುವರಾಯಸ್ವಾಮಿ ಮತ್ತು ಪಿ.ಎಂ.ನರೇಂದ್ರಸ್ವಾಮಿ ಅವರು ಜಿಲ್ಲೆಯವರೇ ಆಗಿರುವುದರಿಂದ ಸಮಾವೇಶ ಯಶಸ್ವಿಗೊಳಿಸಬೇಕಿದೆ. ಇದಕ್ಕೆ ಬೇಕಾದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂತೆಯೇ ಇಬ್ಬರು ನಾಯಕರ ನೇತೃತ್ವದಲ್ಲಿ ರೂಪುರೇಷೆ ಸಿದ್ಧಪಡಿಸಿಕೊಳ್ಳಲಾಗಿದೆ. ಮಾತ್ರವಲ್ಲದೆ ಪ್ರತಿ ವಿಧಾನಸಭಾವಾರು ಮುಖಂಡರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಅದರಂತೆ ನಿರ್ವಹಣೆಯೂ ಉತ್ತಮವಾಗಿ ನಡೆದಿದೆ. ಇನ್ನು ಈಗಾಗಲೇ ಏಳು ತಾಲೂಕಿನಲ್ಲಿ ಪೂರ್ವಭಾವಿ ಸಭೆಗಳನ್ನು ಮಾಡಲಾಗಿದೆ. ಇತ್ತ ಟಿಕೆಟ್ ಆಕಾಂಕ್ಷಿಗಳು ನಾಯಕರ ಗಮನ ಸೆಳೆಯಲು ಪೈಪೋಟಿಗೆ ಬಿದ್ದವರಂತೆ ಫ್ಲೆಕ್ಸ್‌ಗಳನ್ನು ಹಾಕಿಸಿದ್ದಾರೆ.
ಹುರುಪಿನಲ್ಲಿದೆ ಕೈ ಪಾಳಯ: 2018ರ ಚುನಾವಣೆಯಲ್ಲಿ ಏಳು ಕ್ಷೇತ್ರವನ್ನೂ ಕಳೆದುಕೊಂಡು ಹೀನಾಯ ಸ್ಥಿತಿ ತಲುಪಿದ್ದ ಕಾಂಗ್ರೆಸ್‌ನಲ್ಲಿ ನೀರವ ಮೌನ ಕಾಣಿಸಿಕೊಂಡಿತ್ತು. ನಂತರ ಫಿನಿಕ್ಸ್‌ನಂತೆ ಎದ್ದ ಕೈ ನಾಯಕರು ಜಿಲ್ಲೆಯಲ್ಲಿ ತಮ್ಮ ಖದರ್ ತೋರಿಸಿದರು. ಬದ್ಧವೈರಿ ಜೆಡಿಎಸ್‌ಗೆ ಪ್ರತಿ ಹಂತದಲ್ಲಿಯೂ ಠಕ್ಕರ್ ಕೊಡುತ್ತಾ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಕೆ.ಆರ್.ಪೇಟೆ ವಿಧಾನಸಭಾ ಉಪಚುನಾವಣೆ, ಲೋಕಸಭೆ ಹಾಗೂ ಎರಡು ವಿಧಾನ ಪರಿಷತ್ ಚುನಾವಣೆಯಲ್ಲಿ ಸೋಲುಣಿಸಿ ಕಾಂಗ್ರೆಸ್ ಮತ್ತೆ ಜಿಲ್ಲೆಯಲ್ಲಿ ಟ್ರಾೃಕ್‌ಗೆ ಮರಳಿತು.
ಈ ನಡುವೆ ನಡೆದ ಭಾರತ್ ಜೋಡೋ ಯಾತ್ರೆ ಕಾಂಗ್ರೆಸ್ ಪಾಲಿಗೆ ಮಹತ್ವದ ಕಾರ್ಯಕ್ರಮವಾಗಿತ್ತು. ಅದನ್ನು ಸವಾಲಾಗಿ ಸ್ವೀಕರಿಸಿದ ಕಾಂಗ್ರೆಸ್ ನಾಯಕರು ಸಂಘಟಿತವಾಗಿ ನಡೆಸಿದ ಯೋಜನೆ ಫಲಕಾರಿಯಾಗಿತ್ತು. ಮೂರು ದಿನದಲ್ಲಿ ಲಕ್ಷಾಂತರ ಜನರು ಆಗಮಿಸುವ ಮೂಲಕ ಐಕ್ಯತಾ ಯಾತ್ರೆಗೆ ಬೆಂಬಲ ಸೂಚಿಸಿದರು. ಈ ಎಲ್ಲವೂ ಕಾಂಗ್ರೆಸ್ ಪಾಳಯದ ಹುಮ್ಮಸ್ಸನ್ನು ಹೆಚ್ಚಿಸಿತು. ಮಾತ್ರವಲ್ಲದೆ