ಶೃಂಗೇರಿ: ಹಿಂದಿನ ಕಾಲದ ಜನರ ಬದುಕೇ ಜಾನಪದ. ಯುವಪೀಳಿಗೆಗೆ ಶಿಕ್ಷಣದ ಜತೆಗೆ ಜಾನಪದ ಮಹತ್ವ ತಿಳಿಸಿಕೊಡುವ ಅವಶ್ಯಕತೆ ಇದೆ. ಸಂಘ ಸಂಸ್ಥೆಗಳು ಒಂದಾಗಿ ಕನ್ನಡ ನಾಡು, ನುಡಿ ಮತ್ತು ಜಾನಪದ ಸಂಸ್ಕೃತಿ ಉಳಿವಿಗಾಗಿ ಕೆಲಸ ಮಾಡಬೇಕು ಎಂದು ವಕೀಲ ಸುಧೀರ್‌ಕುಮಾರ್ ಮುರೊಳ್ಳಿ ಹೇಳಿದರು.
ಕುಂಚೇಬೈಲ್ ಸರ್ಕಾರಿ ಶಾಲೆಯಲ್ಲಿ ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ಮತ್ತು ಜಾನಪದ ಪರಿಕರಗಳನ್ನು ವಿತರಿಸಿ ಮಾತನಾಡಿದರು.
ಬದುಕಿನ ನೋವು, ನಲಿವುಗಳನ್ನು ಒಳಗೊಂಡಿರುವ ಜನಪದ ನಮ್ಮೆಲ್ಲರ ಬದುಕಿಗೆ ಹತ್ತಿರವಾದ ಸಾಹಿತ್ಯ. ಜಾನಪದ ಧಾರ್ಮಿಕ ಆಚರಣೆಗಳ ಜತೆಗೆ ಆಧ್ಯಾತ್ಮಿಕ ಜ್ಞಾನ ನೀಡುತ್ತದೆ. ಮನಸ್ಸಿಗೆ ಮುದನೀಡುವ ಜಾನಪದ ಸಾಹಿತ್ಯ ಶಾಶ್ವತವಾಗಿ ನೆಲೆಯೂರಬೇಕಿದೆ ಎಂದರು.
ಕನ್ನಡ ಜಾನಪದ ಜಿಲ್ಲಾ ಘಟಕದ ಅಧ್ಯಕ್ಷ ಓಣಿತೋಟ ರತ್ನಾಕರ್ ಮಾತನಾಡಿ, ಯುವ ಪೀಳಿಗೆ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಹಿರಿಯರು ಸಾಹಿತ್ಯದ ಮೂಲಕ ನೀಡಿದ ಜೀವನದ ಅನುಭವದ ಸಾರವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು.ದೇಶದ ಸಂಸ್ಕೃತಿಗೆ ಜಾನಪದದ ಕೊಡುಗೆ ಅಮೂಲ್ಯ. ಕರ್ನಾಟಕದಲ್ಲಿ ಜಾನಪದ ಸೊಗಡು ಮಾಯವಾಗುತ್ತಿದ್ದು ಅದನ್ನು ಜತನದಿಂದ ಕಾಪಾಡುವ ಹೊಣೆಗಾರಿಕೆ ಸರ್ವರ ಮೇಲಿದೆ ಎಂದರು.
ಮಲೆನಾಡು ಮತ್ತು ಕರಾವಳಿ ಜನಪರ ಒಕ್ಕೂಟದ ಸಂಚಾಲಕ ಅನಿಲ್ ಹೊಸಕೊಪ್ಪ, ಎಸ್‌ಐ ಜಕ್ಕಣ್ಣನವರ್, ಎಸ್‌ಡಿಎಂಸಿ ಅಧ್ಯಕ್ಷ ಸುಖೇಶ್, ತಾಲೂಕು ಕಜಾಪ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಮಂಜುನಾಥ್, ಗ್ರಾಪಂ ಉಪಾಧ್ಯಕ್ಷೆ ಭಾಗ್ಯಾ ಕೌಶಿಕ್, ಸದಸ್ಯ ಅಶೋಕ್, ಕಲಾವಿದ ಜಗದೀಶ್ ಕಣದಮನೆ, ಪತ್ರಕರ್ತ ಜಿನೇಶ್ ಇರ್ವತ್ತೂರು ಇದ್ದರು.