ಹುಣಸೂರು: ಶ್ರೀಆದಿಶಂಕರರು ಜ್ಞಾನಮಾರ್ಗದ ಮೂಲಕ ಮುಕ್ತಿ ಸಾಧ್ಯವೆಂದು ಪ್ರತಿಪಾದಿಸಿದರೆ, ಶ್ರೀರಾಮಾನುಜಾಚಾರ್ಯರು ಭಕ್ತಿ ಮಾರ್ಗದ ಮೂಲಕ ಮುಕ್ತಿ ಗಳಿಸಬಹುದೆಂದು ಪ್ರತಿಪಾದಿಸಿದ್ದರು ಎಂದು ರಾವಂದೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಆಂಗ್ಲಭಾಷೆ ಉಪನ್ಯಾಸಕ ಲಕ್ಷ್ಮೀಕಾಂತ್ ತಿಳಿಸಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಶ್ರೀಶಂಕರ ಭಗವತ್ಪಾದರು ಮತ್ತು ಶ್ರೀರಾಮಾನುಜಾಚಾರ್ಯರ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.
ಶ್ರೀಶಂಕರರ ಜೀವಿತ ಕಾಲವಾದ 8ನೇ ಶತಮಾನದಲ್ಲಿ ಜೈನ ಮತ್ತು ಬೌದ್ಧ ಧರ್ಮಗಳ ಹೊಡೆತಕ್ಕೆ ಸಿಲುಕಿ ಸನಾತನ ಧರ್ಮ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದ ವೇಳೆ ದೇಶಾದ್ಯಂತ ಕಾಲ್ನಡಿಗೆಯಲ್ಲೇ ಸಂಚರಿಸಿ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿ ಸನಾತನ ಧರ್ಮವನ್ನು ಪುನರುಜ್ಜೀವನಗೊಳಿಸಿದರು. ಆತ್ಮ ಮತ್ತು ಪರಮಾತ್ಮ ಬೇರೆಯಲ್ಲ ಎನ್ನುವ ಸಿದ್ಧಾಂತದ ಮೂಲಕ ಮನುಷ್ಯ ಒಳ್ಳೆಯದನ್ನು ಮಾಡಿದಲ್ಲಿ ಮಾತ್ರ ಮುಕ್ತಿ ಹೊಂದಲು ಸಾಧ್ಯ. ಎಲ್ಲರೂ ಒಂದೇ, ಎಲ್ಲರಲ್ಲೂ ದೇವರಿದ್ದಾನೆ. ದೇವರನ್ನು ಒಲಿಸಿಕೊಳ್ಳಲು ಜ್ಞಾನಮಾರ್ಗವೊಂದೇ ದಾರಿಯೆಂದು ಸಾರಿದರು ಎಂದರು.
11ನೇ ಶತಮಾನದಲ್ಲಿ ಹುಟ್ಟಿದ ಶ್ರೀರಾಮಾನುಜಾಚಾರ್ಯರು ತಮ್ಮ ಜೀವಿತಾವಧಿಯಲ್ಲಿ ಜಗಜ್ಯೋತಿ ಬಸವೇಶ್ವರರ ಕಾಲಕ್ಕಿಂತಲೂ ಮುಂಚೆಯೇ ದೇವಾಲಯಗಳಿಗೆ ದಲಿತರು, ಶೋಷಿತರಿಗೆ ಪ್ರವೇಶಾವಕಾಶ, ಮಹಿಳೆಯರಿಗೆ ಆದ್ಯತೆ, ಕೆರೆ-ಕಟ್ಟೆಗಳ ನಿರ್ಮಾಣದ ಮೂಲಕ ಸಾಮಾಜಿಕ ನ್ಯಾಯ ನೀಡಿದ್ದರು. ಜಾತಿ, ಮತ, ಪಂಥಗಳನ್ನು ತೊರೆದು ವೈಷ್ಣವ ದೀಕ್ಷೆಯ ಮೂಲಕ ಎಲ್ಲರನ್ನೂ ತನ್ನವರನ್ನಾಗಿಸಿಕೊಂಡರು. ವೈಕುಂಠ ಏಕಾದಶಿ ಆಚರಿಸುವ ಮೂಲಕ ಎಲ್ಲ ಸಮಾಜದವರಿಗೂ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟರು. ಇವರಿಬ್ಬರ ಸಾಮಾಜಿಕ ಕಳಕಳಿ, ಧರ್ಮಮಾರ್ಗಗಳು, ಜ್ಞಾನಕ್ಕೆ ನೀಡಿದ ಮಹತ್ವ ಎಂದರು.
ತಾಲೂಕು ವಿಪ್ರ ವನಿತಾ ಸಂಘದ ಕಾರ್ಯದರ್ಶಿ ಕಮಲಾಪ್ರಕಾಶ್ ಮಾತನಾಡಿ, ಶ್ರೀಶಂಕರರು ಸರ್ವರಲ್ಲೂ ಭಗವಂತನನ್ನು ಕಾಣು, ನಾನತ್ವವಿದ್ದವನಿಗೆ ಜ್ಞಾನ ಒಲಿಯುವುದಿಲ್ಲ. ಸಾಮಾಜಿಕ ಏಕತೆಯೊಂದೇ ನೆಮ್ಮದಿಯ ಬದುಕಿಗೆ ದಾರಿಯೆಂದು ಪ್ರತಿಪಾದಿಸಿದ್ದರು. ಅಲ್ಲದೇ ದುರ್ಬಲರ ನೆರವಿಗೆ ಯಥಾಶಕ್ತಿ ಪ್ರಯತ್ನಿಸು ಎಂದು ತಿಳಿಸಿದ್ದು, ಅವರ ಬದುಕೇ ನಮಗೆಲ್ಲರಿಗೂ ದಾರಿದೀಪವಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಜೆ.ಮಂಜುನಾಥ್ ಮಾತನಾಡಿದರು. ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಭಾಸ್ಕರ್ ಭಟ್, ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ, ಸಮಾಜದ ಮುಖಂಡರಾದ ಆಡಿಟರ್ ನಾಗರಾಜ್, ಶ್ರೀಶೈಲ ಸುಬ್ರಮಣ್ಯ, ಸುಕನ್ಯಾ ರಾಘವೇಂದ್ರ. ಅಂಬುಜಾ ವೆಂಕಟೇಶ್, ಮಾಜಿ ಅಧ್ಯಕ್ಷ ವಿ.ಎನ್.ದಾಸ್, ಅಕ್ಷಯ ಭಂಡಾರ್ ಗಿರೀಶ್, ಸ್ಟುಡಿಯೋ ರಾಮಣ್ಣ, ಭಾಸ್ಕರ್, ಫಾಲಾಕ್ಷ, ಪದ್ಮನಾಭ್, ಮಾರುತಿ, ಲೋಕೇಶ್, ನರಸಿಂಹಣ್ಣ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮೋದೂರು ಮಹೇಶಾರಾಧ್ಯ, ದಲಿತ ಮುಖಂಡ ಡಿ.ಕುಮಾರ್, ಮುಸ್ಲಿಂ ಮುಖಂಡ ಗುರುಪುರ ಖಾಲಿದ್, ರೈತಸಂಘದ ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಕಸಾಪ ಅಧ್ಯಕ್ಷ ಮಹದೇವ್, ಉಪವಿಭಾಗಾಧಿಕಾರಿ ಕಚೇರಿ ತಹಸೀಲ್ದಾರ್ ಯದುಗಿರೀಶ್, ಶಿರಸ್ತೇದಾರ್ ಶ್ರೀಪಾದ್ ನಲವತ್ತ್‌ವಾಡಕರ್ ಮತ್ತಿತರರು ಭಾಗವಹಿಸಿದ್ದರು.