ಜಿಲ್ಲೆ

ಶಂಕರಗೆ ಹೊಸ ಜವಾಬ್ದಾರಿ

ಹುಬ್ಬಳ್ಳಿ: ಎರಡು ಬಾರಿ ಶಾಸಕರಾಗಿ, ಈ ಹಿಂದೆ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿರುವ ನವಲಗುಂದ ವಿಧಾನಸಭೆ ಕ್ಷೇತ್ರದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರು ಈಗ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮ ಅಧ್ಯಕ್ಷರು.

ಈ ಮೂಲಕ ಉತ್ತರ ಕರ್ನಾಟಕ ಭಾಗದ ಯುವ ನಾಯಕ, ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸಮಸ್ಯೆ, ಸವಾಲುಗಳನ್ನು ತಳಮಟ್ಟದಿಂದ ಅರಿತಿರುವ ಶಂಕರ್​ಗೆ ಹೊಸ ಜವಾಬ್ದಾರಿ ವಹಿಸಿದಂತಾಗಿದೆ.

ಈಗಾಗಲೇ ಜಗದೀಶ ಶೆಟ್ಟರ್ ಅವರು ರಾಜ್ಯ ಸರ್ಕಾರದಲ್ಲಿ, ಪ್ರಲ್ಹಾದ ಜೋಶಿ ಅವರು ಕೇಂದ್ರ ಸಂಪುಟದಲ್ಲಿ ಪ್ರಮುಖ ಸಚಿವ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಇದೀಗ ಶಂಕರ ಪಾಟೀಲರಿಗೆ ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ ಜವಾಬ್ದಾರಿ ನೀಡಿರುವುದು ಹೊಸ ಬೆಳವಣಿಗೆಯಾಗಿದೆ. ಇದರಿಂದ ಧಾರವಾಡ ಜಿಲ್ಲೆಯಲ್ಲಿ ಮೂವರಿಗೆ ಅಧಿಕಾರಯುತ ಹೊಣೆ ಲಭಿಸಿದಂತಾಗಿದೆ. ಶಂಕರ ಪಾಟೀಲ ಅವರಿಗೆ ಇದೊಂದು ಒಳ್ಳೆಯ ಅವಕಾಶ ಎಂದೇ ಹೇಳಲಾಗುತ್ತಿದೆ. ನಗರ ಮೂಲ ಸೌಕರ್ಯ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ ರಾಜ್ಯ ಮಟ್ಟದಲ್ಲಿ ಜನಮನ್ನಣೆ ಗಳಿಸಬಹುದಾಗಿದೆ. ಇದೇ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದಲ್ಲಿ ನಗರ ಬೆಳವಣಿಗೆ ಹಾಗೂ ಅಗತ್ಯ ಸೌಕರ್ಯಗಳು ಲಭ್ಯವಾಗುವ ದಿಸೆಯಲ್ಲಿ ಮುನೇನಕೊಪ್ಪ ಅವರ ಮೇಲೆ ಜನರ ನಿರೀಕ್ಷೆ ಸಹಜವಾಗಿ ಹೆಚ್ಚಾಗಿದೆ.