ಮೈಸೂರು: ಅಪಾಯಕಾರಿ ಸ್ಕೂಟರ್ ವ್ಹೀಲಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದ ಮಹಿಳಾ ಪಿಎಸ್‌ಐ ಪುತ್ರನನ್ನು ಸಿದ್ದಾರ್ಥನಗರ ಸಂಚಾರ ಠಾಣೆ ಪೊಲೀಸರು ವಶಕ್ಕೆ ಪಡೆದು ಕ್ರಮ ಕೈಗೊಂಡಿದ್ದಾರೆ.
ನಗರದ ಉದಯಗಿರಿಯ ಸೈಯಾದ್ ಐಮಾನ್ (28) ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈತ ಆ.19 ರಂದು ಮಧ್ಯಾಹ್ನ 2.30 ರಲ್ಲಿ ನಗರದ ರಿಂಗ್ ರಸ್ತೆ ಮತ್ತು ರಾಜೀವ್‌ನಗರದ ಪ್ರಮುಖ ರಸ್ತೆಗಳಲ್ಲಿ ಸ್ಕೂಟರ್‌ನಲ್ಲಿ ವ್ಹೀಲಿಂಗ್ ಮಾಡುತ್ತಾ ಪುಂಡಾಟವೆಸಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಲ್ಮೆಟ್ ಧರಿಸದೆ ರಿಂಗ್ ರಸ್ತೆಯಲ್ಲಿ ಆರ್‌ಟಿಒ ಕಡೆಯಿಂದ ರಾಜೀವ್‌ನಗರ ವಾಟರ್ ಟ್ಯಾಂಕ್‌ವರೆಗೆ ಅಪಾಯಕಾರಿಯಾಗಿ ಮಾನವ ಜೀವಕ್ಕೆ ಹಾಗೂ ಇತರ ವಾಹನ ಸಂಚಾರಕ್ಕೆ ತೊಂದರೆಯುಂಟಾಗುವ ರೀತಿಯಲ್ಲಿ ವ್ಹೀಲಿಂಗ್ ಮಾಡಿದ್ದಲ್ಲದೇ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಎಂದು ಸಿದ್ಧಾರ್ಥ ನಗರ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.
ವ್ಹೀಲಿಂಗ್ ಮಾಡುತ್ತಿರುವ ವಿಡಿಯೋ ಆಧರಿಸಿ ಆರೋಪಿ ಹಾಗೂ ಆತ ಬಳಸಿದ್ದ ಸ್ಕೂಟರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.