ಜಿಲ್ಲೆ

ವ್ಹೀಲಿಂಗ್ ಮಾಡಿದ ಯುವಕನ ವಿರುದ್ಧ ಪ್ರಕರಣ ದಾಖಲು

ಮೈಸೂರು: ರಿಂಗ್ ರಸ್ತೆಯಲ್ಲಿ ಸ್ಕೂಟರ್ ವ್ಹೀಲಿಂಗ್ ಮಾಡುತ್ತಿದ್ದ ಯುವಕ ಉಸ್ಮಾನ್ ಷರೀಫ್ ಎಂಬಾತನ ವಿರುದ್ಧ ಸಿದ್ಧಾರ್ಥನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಿಂಗ್ ರಸ್ತೆಯಲ್ಲಿ ಕರುಣಾಕರ ಆಸ್ಪತ್ರೆ ಜಂಕ್ಷನ್ ಕಡೆಯಿಂದ ರಾಜೀವ್‌ನಗರ ವಾಟರ್ ಟ್ಯಾಂಕ್ ಜಂಕ್ಷನ್ ಕಡೆಗೆ ಕಲ್ಯಾಣಗಿರಿ ಬಡಾವಣೆಯಲ್ಲಿ ಸ್ಕೂಟರ್‌ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದ. ವಿಷಯ ತಿಳಿದ ಸಿದ್ಧಾರ್ಥನಗರ ಸಂಚಾರ ಠಾಣೆ ಪೊಲೀಸರು ಆತನ ಸ್ಕೂಟರ್ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದಾರೆ.

ವ್ಹೀಲಿಂಗ್ ಮಾಡುತ್ತಿದ್ದ ಸ್ಕೂಟರ್‌ನ ಹಿಂಬದಿಯಲ್ಲಿ ಮತ್ತೊಬ್ಬ ಕುಳಿತಿದ್ದ. ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ. ಅಪಾಯಕಾರಿ ವ್ಹೀಲಿಂಗ್ ಮೂಲಕ ಸಾರ್ವಜನಿಕರ ಜೀವಕ್ಕೆ ಸಂಚಕಾರ ತಂದೊಡ್ಡಿದ್ದ.

ಇದರಿಂದ ರಸ್ತೆ ಸಂಚಾರಕ್ಕೂ ಅಡ್ಡಿಯಾಗಿತ್ತು. ಈ ಕಾರಣದಿಂದ ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.