ಹುಬ್ಬಳ್ಳಿ: ಸರ್ಕಾರಿ ತಂಡ ಹೇಗಾದರೂ ಮಾಡಿ ಕರೊನಾ ಕಪಿಮುಷ್ಟಿಯಿಂದ ಧಾರವಾಡ ಜಿಲ್ಲೆಯನ್ನು ಬಿಡಿಸಿ, ಸಾರ್ವಜನಿಕ ಬದುಕನ್ನು ಸಹಜ ಸ್ಥಿತಿಗೆ ತರಲು ಶ್ರಮಿಸುತ್ತಿರುವುದಕ್ಕೆ ಸ್ವಲ್ಪ ಯಶಸ್ಸು ಸಿಕ್ಕಿತು ಎಂದುಕೊಳ್ಳುವಾಗಲೇ ಹೊಸ ಹೊಸ ಕರೊನಾ ಸೋಂಕು ಪ್ರಕರಣ ಕಂಡುಬರುತ್ತಿದೆ.
ಇದರಿಂದಾಗಿ, ಕಿತ್ತಳೆ ವಲಯಕ್ಕೆ ತೆರಳಿದ್ದ ಜಿಲ್ಲೆ ಮತ್ತೆ ಕೆಂಪು ವಲಯದತ್ತ ಹೊರಳುತ್ತಿದ್ದು, ಸಾರ್ವಜನಿಕ ಬದುಕು ದಶಕಗಳಷ್ಟು ಹಿಂದಕ್ಕೆ ಹೋಗುವಂತಾಗಿದೆ.
ಆರಂಭದಲ್ಲಿ ಧಾರವಾಡ ನಗರದಲ್ಲಿ ಕರೊನಾ ಸೋಂಕು ಕಂಡುಬಂದಿತಾದರೂ, ನಂತರದ ಸರದಿ ಹುಬ್ಬಳ್ಳಿಯದಾಯಿತು. ಧಾರವಾಡ ವ್ಯಕ್ತಿಗೆ ವಿದೇಶದಿಂದ ಬರುವಾಗ ಸೋಂಕು ಬಂದಿತ್ತು. ಹುಬ್ಬಳ್ಳಿ ಮುಲ್ಲಾ ಓಣಿಯ 27 ವರ್ಷದ ವ್ಯಕ್ತಿ ಹೈದರಾಬಾದ್, ದೆಹಲಿ, ಮುಂಬೈ ಪ್ರವಾಸ ಮಾಡಿ ಬರುವಾಗ ಸೋಂಕು ತಗುಲಿತ್ತು. ನಂತರದ್ದೆಲ್ಲ ಸ್ಥಳೀಯವಾಗಿ ಸೋಂಕು ಹರಡುವಿಕೆಯಿಂದಲೇ ಕಂಡುಬಂದ ಪಾಸಿಟಿವ್ ಕೇಸ್ಗಳು.
27 ವರ್ಷದವನಿಂದ ಕುಟುಂಬದವರಿಗೆ, ಆತನ ಅಣ್ಣನಿಂದ ಕರಾಡಿ ಓಣಿ ನಿವಾಸಿ ವೃದ್ಧನಿಗೆ ಸೋಂಕು ಹರಡಿತು ಎನ್ನುವುದು ಮಾಹಿತಿ ಸಂಗ್ರಹದಿಂದ ತಿಳಿದುಬಂದಿದೆ. ಅದರ ನಂತರದ ಪ್ರಕರಣಗಳಾದ ಕೇಶ್ವಾಪುರ ಶಾಂತಿ ನಗರದ ಪುರುಷ, ಧಾರವಾಡ ನವಲೂರಿನ ಪಠಾಣ ಗಲ್ಲಿಯ 26 ವರ್ಷದ ಪುರುಷನ ಪ್ರಕರಣದಲ್ಲಿ ಕರೊನಾ ವೈರಸ್ ಸೋಂಕಿನ ಮೂಲ ಗೊತ್ತಾಗುತ್ತಿಲ್ಲ. ಗುರುವಾರ ಕಂಡುಬಂದ ಮತ್ತೊಂದು ಪ್ರಕರಣದಲ್ಲಿಯೂ ಪರಿಸ್ಥಿತಿ ಹಾಗೇ ಇದೆ. ಅಂದರೆ, ಜಿಲ್ಲೆಯಲ್ಲಿ ಕರೊನಾ ವೈರಸ್ 3ನೇ ಹಂತಕ್ಕೆ ಹೋಗುತ್ತಿರುವ ಬಲವಾದ ಶಂಕೆ ಮೂಡತೊಡಗಿದೆ.
ಬಹುತೇಕ ಪ್ರಕರಣದಲ್ಲಿ ಜಾಗೃತಿ ವಹಿಸದಿರುವುದೇ ಸೋಂಕು ಹತ್ತಿಕೊಳ್ಳಲು ಕಾರಣವಾಗಿದೆ. ಲಾಕ್ಡೌನ್, ಸೀಲ್ಡೌನ್ ಆದೇಶ ಉಲ್ಲಂಘಿಸುತ್ತಿರುವುದು ಮತ್ತು ವೈಯಕ್ತಿಕ ಸುರಕ್ಷತೆಯನ್ನು ಒಂದಿಷ್ಟು ಜನರು ಅಲಕ್ಷಿಸುತ್ತಿರುವುದರಿಂದಾಗಿ ಹಲವರು ತೊಂದರೆಗೀಡಾಗುತ್ತಿದ್ದಾರೆ. ಕೆಲವರ ಬೇಜವಾಬ್ದಾರಿತನದಿಂದಾಗಿ ಹಲವರು ಆತಂಕದಲ್ಲೇ ಕಾಲ ತಳ್ಳುವಂತೆ ಆಗಿರುವುದು ಶೋಚನೀಯವಾಗಿದೆ. ಆದ್ದರಿಂದ ಸರ್ಕಾರ ಮತ್ತೊಮ್ಮೆ ಲಾಕ್ಡೌನ್ಅನ್ನು ಬಿಗಿಗೊಳಿಸುವ ಸಾಧ್ಯತೆ ಅಧಿಕವಾಗಿದೆ.
ಹೊಸಯಲ್ಲಾಪುರದಲ್ಲೇ ಮತ್ತೊಂದು ಕೋವಿಡ್ ಪ್ರಕರಣ: ಧಾರವಾಡದ ಹೊಸಯಲ್ಲಾಪುರದ ನವಲೂರ ಅಗಸಿಯಲ್ಲಿ (ಕೋಳಿಕೆರೆ) ಗುರುವಾರ ಮತ್ತೊಂದು ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಕೆಮ್ಮು, ನೆಗಡಿ ಹಾಗೂ ಜ್ವರದಿಂದ ಬಳಲುತ್ತಿದ್ದ 35 ವರ್ಷದ ವ್ಯಕ್ತಿಯೊಬ್ಬರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದು ರಾಜ್ಯದ 705ನೇ ಪ್ರಕರಣವಾಗಿರುವುದರಿಂದ ಪಿ 705 ಎಂದು ಗುರುತಿಸಲಾಗಿದೆ. ಜಿಲ್ಲೆಯ 12ನೇ ಪ್ರಕರಣವಾಗಿದೆ. ಈಗಾಗಲೇ 6 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದ 6 ಜನ ಹುಬ್ಬಳ್ಳಿಯ ಕಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
ಮತ್ತೆ ಕಂಟೇನ್ಮೆಂಟ್: ಜಿಲ್ಲೆಯ ಮೊದಲ ಕೋವಿಡ್ ಪಾಸಿಟಿವ್ ಪ್ರಕರಣ ಹೊಸಯಲ್ಲಾಪುರದಲ್ಲಿ (33 ವರ್ಷದ ಯುವಕ) ಪತ್ತೆಯಾಗಿತ್ತು. 12ನೇ ಪ್ರಕರಣ ಮತ್ತೆ ಅದೇ ಪ್ರದೇಶದಲ್ಲಿ ಪತ್ತೆಯಾಗಿದೆ. ಕರೊನಾ ದೃಢಪಟ್ಟ ಪಿ 705 ವ್ಯಕ್ತಿ ಮೆಣಸಿನಕಾಯಿ ವ್ಯಾಪಾರಿ ಎಂದು ತಿಳಿದುಬಂದಿದೆ. ಆತನಿಂದ ತಾವೇನಾದರೂ ಮೆಣಸಿನಕಾಯಿ ಖರೀದಿಸಿದ್ದೇವೆಯೆ ಎಂದು ಹಲವರು ಆತಂಕ ಪಡುವಂತಾಗಿದೆ. ವ್ಯಕ್ತಿ ಧಾರವಾಡ ನಗರ ಹೊರತುಪಡಿಸಿ ಬೇರೆಲ್ಲೂ ಪ್ರಯಾಣಿಸಿಲ್ಲ ಎನ್ನಲಾಗಿದೆ. ಮೊದಲು ಕಂಟೇನ್ಮೆಂಟ್ ಪ್ರದೇಶವಾಗಿ, ಮೊದಲ ಸೋಂಕಿತ ವ್ಯಕ್ತಿ ಗುಣಮುಖನಾಗಿ 15 ದಿನದ ಮೇಲೆ ಕಂಟೇನ್ಮೆಂಟ್ ಆದೇಶದಿಂದ ಮುಕ್ತವಾಗಿದ್ದ ಪ್ರದೇಶದ 3 ಕಿ.ಮೀ. ವ್ಯಾಪ್ತಿ ಈಗ ಮತ್ತೊಮ್ಮೆ ನಿರ್ಬಂಧಿತ ಪ್ರದೇಶವಾಗಿದೆ.
386 ಜನರ ವರದಿ ಬಾಕಿ: ಧಾರವಾಡ ಜಿಲ್ಲೆಯಲ್ಲಿ ಕರೊನಾ ಸೋಂಕು ದೃಢಪಟ್ಟ ಪ್ರಕರಣಗಳು ವರದಿಯಾಗುತ್ತಲೇ ಇವೆ. ಜಿಲ್ಲೆಯಾದ್ಯಂತ ಇನ್ನೂ 386 ಜನರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಕರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆಯು ವಿದೇಶದಿಂದ ಆಗಮಿಸಿರುವ ಹಾಗೂ ಅವರ ಸಂಪರ್ಕಕ್ಕೆ ಒಳಗಾದ 4,858 ಜನರ ಮೇಲೆ ನಿಗಾ ವಹಿಸಿದೆ. ಈ ಪೈಕಿ 3,935 ಜನರಿಗೆ 14 ದಿನಗಳವರೆಗೆ ಮನೆಯಲ್ಲೇ ಪ್ರತ್ಯೇಕವಾಗಿ ವಾಸಿಸುವಂತೆ ಸೂಚಿಸಲಾಗಿದೆ. ಇದುವರೆಗೆ 12 ಜನರಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು, 6 ಜನ ಗುಣಮುಖರಾಗಿದ್ದಾರೆ. 6 ಜನರಿಗೆ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 105 ಜನ 14 ದಿನ ಹಾಗೂ 808 ಜನ 28 ದಿನಗಳ ಐಸೋಲೇಷನ್ ಪೂರ್ಣಗೊಳಿಸಿದ್ದಾರೆ. ಇದುವರೆಗೆ 4225 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, 3833 ಜನರಲ್ಲಿ ನೆಗೆಟಿವ್ ಬಂದಿದೆ. ಇನ್ನೂ 386 ಜನರ ವರದಿ ಬಾಕಿ ಇದೆ.
ಗರ್ಭಿಣಿ ಆರೋಗ್ಯ ವಿಚಾರಣೆಗೆ ವಿಶೇಷ ತಂಡ: ಹುಬ್ಬಳ್ಳಿಯ ಕಿಮ್್ಸ ವಿಶೇಷ ವಾರ್ಡ್ಗೆ ದಾಖಲಾಗಿರುವ ಬಾದಾಮಿ ತಾಲೂಕು ಢಾಣಕಶಿರೂರು ಗ್ರಾಮದ ಕರೊನಾ ಸೋಂಕು ಪೀಡಿತ ಗರ್ಭಿಣಿ ಮಾನಸಿಕವಾಗಿ ಕುಗ್ಗಿದಂತೆ ಕಂಡುಬರುತ್ತಿದ್ದು, ಈ ಪ್ರಕರಣ ವೈದ್ಯರಿಗೆ ಸವಾಲಾಗಿ ಪರಿಣಮಿಸಿದೆ ಎಂದು ತಿಳಿದುಬಂದಿದೆ.
ಗರ್ಭಿಣಿಯು ಮಾನಸಿಕವಾಗಿ ಸೊರಗಿದರೆ ಅದರ ಪರಿಣಾಮ ಹೊಟ್ಟೆಯೊಳಗಿನ ಶಿಶುವಿನ ಆರೋಗ್ಯದ ಮೇಲೆಯೂ ಬೀಳುತ್ತದೆ. ಕಣ್ಣೆದುರು ಇರುವ ಮಹಿಳೆಯ ಆರೋಗ್ಯಕ್ಕೆ ಕೊಟ್ಟಷ್ಟೇ ಆದ್ಯತೆಯನ್ನು ಕಣ್ಣಿಗೆ ಕಾಣದ ಶಿಶುವಿನ ಆರೋಗ್ಯಕ್ಕೂ ಕೊಡಬೇಕಿದ್ದು, ಇದು ಸುಲಭದ ಕೆಲಸವಲ್ಲ.
ಅತ್ಯಂತ ಸೂಕ್ಷ್ಮವಾದ ಈ ಪ್ರಕರಣವನ್ನು ನಿಭಾಯಿಸಲು ಕಿಮ್್ಸ ನಿರ್ದೇಶಕರು ತಜ್ಞ ವೈದ್ಯರ ತಂಡ ರಚಿಸಿದ್ದಾರೆ.
ಕೂಲಂಕಷ ಪರಿಶೀಲನೆ ನಂತರ ವೈದ್ಯರ ತಂಡ ಹಲವಾರು ಅಂಶಗಳನ್ನು ರ್ಚಚಿಸಿದೆ. ತಂಡದ ಸದಸ್ಯರು ತುಲನಾತ್ಮಕವಾಗಿ ನೋಡಿದಾಗ- ಮಹಿಳೆಯ ಜೀವಕ್ಕೆ ಅಪಾಯವಾಗದಂತೆ ನೋಡಿಕೊಳ್ಳುವುದೇ ಪ್ರಥಮ ಆದ್ಯತೆ, ತೀರ ಅನಿವಾರ್ಯವಾದಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಶಿಶುವನ್ನು ತೆಗೆಯದೇ ಬೇರೆ ದಾರಿ ಇರುವುದಿಲ್ಲ ಎಂಬ ಒಮ್ಮತಾಭಿಪ್ರಾಯಕ್ಕೆ ಬಂದಿದ್ದಾರೆ.
ಅನ್ಯ ಮಾರ್ಗವೇ ಗೋಚರಿಸದಿದ್ದಾಗ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು ಕ್ರಮ ಜರುಗಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ, ಗರ್ಭಿಣಿಯ ಆರೋಗ್ಯ ಸ್ಥಿರವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರತಿಭಟನೆ ನಡೆಸಿದವರ ವಿರುದ್ಧ ಪ್ರಕರಣ: ಲಾಕ್ಡೌನ್ ಹಾಗೂ ನಿಷೇಧಾಜ್ಞೆ ಉಲ್ಲಂಘಿಸಿ ಹುಬ್ಬಳ್ಳಿ ಪಾಲಿಕೆ ಆವರಣದಲ್ಲಿ 25ಕ್ಕೂ ಹೆಚ್ಚು ಜನ ಸೇರಿ ಪ್ರತಿಭಟನೆ ನಡೆಸಿದ್ದ ಪಾಲಿಕೆ ಗುತ್ತಿಗೆದಾರರ ಸಂಘದ ವಿರುದ್ಧ ಉಪನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ. ಗುತ್ತಿಗೆದಾರ ಪಂಪಣ್ಣ ಅಂಬಿಗೇರ ಸೇರಿ 25ಕ್ಕೂ ಹೆಚ್ಚು ಗುತ್ತಿಗೆದಾರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಬೆಳಗ್ಗೆ ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು. ನಿಷೇಧಾಜ್ಞೆ ಉಲ್ಲಂಘಿಸಿ ಗುಂಪು ಸೇರಿದ್ದರು. ಈ ಕುರಿತು ಪಾಲಿಕೆ ಉಪ ಆಯುಕ್ತ ಎ.ಆರ್. ದೇಸಾಯಿ ದೂರು ನೀಡಿದ್ದಾರೆ.