ಕೊಳ್ಳೇಗಾಲ: ಪಟ್ಣಣದ ಡಾ.ರಾಜ್‌ಕುಮಾರ್ ರಸ್ತೆಯಲ್ಲಿ ತಳ್ಳುಗಾಡಿಯ ವ್ಯಾಪಾರಿ ಮೇಲೆ ಪೊಲೀಸ್ ಸಿಬ್ಬಂದಿಯೊಬ್ಬರು ಹಲ್ಲೆ ಮಾಡಿದ್ದಾರೆ ಎಂದು ತಳ್ಳುಗಾಡಿಗಳ ವ್ಯಾಪಾರಿಗಳು ಡಿವೈಎಸ್ಪಿ ಎಂ.ಧರ್ಮೇಂದ್ರ ಅವರಿಗೆ ಮೌಖಿಕವಾಗಿ ದೂರಿದರು.
ಪೊಲೀಸ್ ಠಾಣೆಗೆ ಧಾವಿಸಿದ ವ್ಯಾಪಾರಿಗಳನ್ನು ಕೂರಿಸಿ ಡಿವೈಎಸ್ಪಿ ಎಂ.ಧರ್ಮೇಂದ್ರ ಅಹವಾಲು ಆಲಿಸಿದರು. ನಂತರ ಮಾತನಾಡಿದ ಅವರು, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ತಳ್ಳುಗಾಡಿಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ವ್ಯಾಪಾರ ಮಾಡುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸಾರ್ವಜನಿಕರು ನಿತ್ಯವೂ ದೂರುತ್ತಾರೆ. ಈ ಬಗ್ಗೆ ವ್ಯಾಪಾರಿಗಳು ಅರಿತು ಕೊಳ್ಳಬೇಕಿದೆ. ತಳ್ಳುಗಾಡಿಗಳನ್ನು ಒಂದು ಜಾಗದಲ್ಲಿ ನಿಲ್ಲಿಸದೆ ತಳ್ಳಿಕೊಂಡು ವ್ಯಾಪಾರ ಮಾಡಬೇಕೆಂಬ ನಿಯಮವಿದೆ. ಆದರೆ, ರಸ್ತೆ ಹೊಂದಿಕೊಂಡಂತೆ ಗಾಡಿಗಳನ್ನು ನಿಲ್ಲಿಸಿ ವ್ಯಾಪಾರ ಮಾಡಿದರೆ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತದೆ. ಟ್ರಾಫಿಕ್ ಜಾಮ್ ಆಗುತ್ತದೆ. ಪೊಲೀಸ್ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ ಎಂಬ ನಿಮ್ಮ ಆರೋಪವನ್ನು ಪರಿಶೀಲಿಸುತ್ತೇವೆ. ನೀವು ಸಹ ಪೊಲೀಸ್ ಇಲಾಖೆ ಕರ್ತವ್ಯಕ್ಕೆ ಸಹಕಾರ ನೀಡಬೇಕು ತಿಳಿ ಹೇಳಿದರು.
ಈ ವೇಳೆ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಸವರಾಜು ದ್ವಾರಕಿ ಮಾತನಾಡಿ, ವ್ಯಾಪಾರಿಗಳು ಸಂಚಾರಕ್ಕೆ ತೊಂದರೆ ಆಗದಂತೆ ವ್ಯಾಪಾರ ಮಾಡಬೇಕು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೂಚನೆಗೆ ಆದ್ಯತೆ ನೀಡಬೇಕು. ಇಲಾಖೆಯೊಂದಿಗೆ ವಿಶ್ವಾಸದಲ್ಲಿದ್ದುಕೊಂಡು ನಮ್ಮ ವ್ಯಾಪಾರ ನಡೆಸಿಕೊಂಡು ಹೋಗಬೇಕೆಂದು ವ್ಯಾಪಾರಿಗಳಿಗೆ ಸಲಹೆ ನೀಡಿದರು. ಹಾಗೇ ಪೊಲೀಸ್ ಸಿಬ್ಬಂದಿ ವ್ಯಾಪಾರಸ್ಥರಿ ಮೇಲೆ ಹಲ್ಲೆ ನಡೆಸದಂತೆ ಸೂಚನೆ ನೀಡಬೇಕೆಂದು ಡಿವೈಎಸ್ಪಿ ಎಂ.ಧರ್ಮೇಂದ್ರ ಅವರಿಗೆ ಮನವಿ ಮಾಡಿದರು.
ಹಲ್ಲೆ ಆರೋಪ ಸುಖಾಂತ್ಯ: ವ್ಯಾಪಾರಿಗಳ ಜತೆ ಚರ್ಚಿಸಿದ ಬಳಿಕ ಡಿವೈಎಸ್ಪಿ ಎಂ.ಧರ್ಮೇಂದ್ರ ಮಾತನಾಡಿ, ಪಟ್ಟಣದಲ್ಲಿ ಎಷ್ಟು ತಳ್ಳುಗಾಡಿಗಳ ವ್ಯಾಪಾರಸ್ಥರಿದ್ದಾರೆ. ಯಾವ ರಸ್ತೆಯಲ್ಲಿ ವ್ಯಾಪಾರ ಮಾಡಲಾಗುತ್ತಿದೆ ಎಂಬ ಬಗ್ಗೆ ಪಟ್ಟಿಯನ್ನು ಸಂಘದ ಅಧ್ಯಕ್ಷರು ಒಂದು ವಾರದೊಳಗೆ ಸಲ್ಲಿಸಬೇಕು. ಈ ಬಗ್ಗೆ ನಗರಸಭೆ ಆಯುಕ್ತರು ಹಾಗೂ ಅಧ್ಯಕ್ಷರ ಜತೆ ಚರ್ಚಿಸಿ ವ್ಯಾಪಾರಕ್ಕೆ ತೊಂದರೆ ಆಗದ ರೀತಿಯಲ್ಲಿ ಕ್ರಮಕೈ ಗೊಳ್ಳಲಾಗುತ್ತದೆ. ಪ್ರತಿ ತಳ್ಳುಗಾಡಿಗಳಿಗೂ ಕ್ರಮ ಸಂಖ್ಯೆಗಳನ್ನು ನೀಡಲಾಗುತ್ತದೆ. ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಡಾ.ರಾಜ್‌ಕುಮಾರ್ ರಸ್ತೆ, ಡಾ.ವಿಷ್ಣುವರ್ಧನ್ ರಸ್ತೆ ಗಳಲ್ಲಿ ಮಾರ್ಕ್ ಮಾಡಿ ವ್ಯಾಪಾರದ ಗಡಿಯನ್ನು ಗುರುತಿಸಿಕೊಳ್ಳಲಾಗುತ್ತದೆ. ಇನ್ನುಮುಂದೆ ಸಂಚಾರಕ್ಕೆ ಅಡ್ಡಿಯಾಗದಂತೆ ತಳ್ಳು ಗಾಡಿಗಳ ವ್ಯಾಪಾರಿಗಳು ಕಾರ್ಯ ನಿರ್ವಹಿಸಬೇಕು. ಗೂಡ್ಸ್ ಆಟೋಗಳಲ್ಲಿ ರಸ್ತೆಯಲ್ಲಿ ನಿಂತು ವ್ಯಾಪಾರ ಮಾಡಕೂಡದು ಎಂದು ಸೂಚನೆ ನೀಡಿದರು. ನಂತರ ವ್ಯಾಪಾರಿಗಳು ಪೊಲೀಸ್ ಠಾಣೆಯಿಂದ ಹೊರ ನಡೆದರು.
ನಗರಸಭೆ ಸದಸ್ಯರ ಜತೆ ಚರ್ಚೆ: ತಳ್ಳುಗಾಡಿಗಳ ವಿಚಾರವಾಗಿ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎ.ಪಿ.ಶಂಕರ್ ಮತ್ತು ಸದಸ್ಯರು ಹಾಗೂ ನಗರಸಭೆ ಆಯುಕ್ತರ ಜತೆ ಡಿವೈಎಸ್ಪಿ ಅವರು ಚರ್ಚಿಸಿದರು. ಈ ವೇಳೆ ಸದಸ್ಯರು ರಸ್ತೆಯಲ್ಲಿ ನಿಂತು ವ್ಯಾಪಾರಕ್ಕಿಳಿಯುವ ತಳ್ಳು ಗಾಡಿಗಳಿಂದ ಆಗುತ್ತಿರುವ ಸಮಸ್ಯೆಗಳು ಹಾಗೂ ಪಟ್ಟಣದಲ್ಲಿ ಹಾದು ಹೋಗಿರುವ ಸರ್ಕಾಟನ್ ಕಾಲುವೆಗೆ ಶಿವ ಬಾರ್ ಪಕ್ಕ ಮತ್ತು ಓಂ ಶಕ್ತಿ ದೇವಾಲಯ ಪಕ್ಕ ತ್ಯಾಜ್ಯ ಸುರಿಯುತ್ತಿರುವ ಬಗ್ಗೆ ವಿವರಿಸಿದರು. ಈ ವೇಳೆ ಮಾ.14 ರಂದು ಸಂಜೆ ಪೊಲೀಸ್ ಇಲಾಖೆ ಹಾಗೂ ನಗರಸಭೆ ಜಂಟಿಯಾಗಿ ರಸ್ತೆ ಪ್ರದಕ್ಷಿಣೆ ಮಾಡಿ ವ್ಯಾಪಾರಿಗಳಿಗೆ ರಸ್ತೆಯ ಬದಿಯಲ್ಲಿ ಗಡಿ ನಿಗದಿಪಡಿಸಿ ಮಾರ್ಕ್ ಮಾಡಿಕೊಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ನಗರಸಭೆ ಸದಸ್ಯರಾದ ಶಾಂತ ರಾಜು, ನಾಸೀರ್‌ಶರೀಫ್, ಮಂಜುನಾಥ್, ಧರಣೇಶ್, ರಾಘವೇಂದ್ರ ಸ್ವಾಮಿ ನಂಜಪ್ಪ, ನಗರಸಭೆ ಮಾಜಿ ಅಧ್ಯಕ್ಷ ರಮೇಶ್ ಇದ್ದರು.