ಜಿಲ್ಲೆ

ವ್ಯಾಪಾರಿಗಳು ರಸ್ತೆ ಅತಿಕ್ರಮಿಸದಂತೆ ನಿಗಾ ವಹಿಸಿ

ಕಂಪ್ಲಿ: ಪುರಸಭೆ ಸಭಾಂಗಣದಲ್ಲಿ ಬುಧವಾರ 2025-26ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆ ನಡೆಯಿತು. ಸ್ವಚ್ಛತೆ, ಕುಡಿವ ನೀರು, ಬೀದಿದೀಪ, ಪಟ್ಟಣ ಅಭಿವೃದ್ಧಿ ಮತ್ತು ಆದಾಯ ಗಳಿಕೆ ಕುರಿತು ಸಾರ್ವಜನಿಕರು, ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಸಲಹೆ ನೀಡಿದರು.

ಮಾರೆಮ್ಮಗುಡಿ ಇಳಿಜಾರು ರಸ್ತೆ, ನಡುವಲ ಮಸೀದಿಯಿಂದ ಜೋಗಿಕಾಲುವೆತನಕ ರಸ್ತೆ ಅಭಿವೃದ್ಧಿಗೊಳಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರಗೃಹಗಳ ನಿರ್ಮಾಣ, ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ, ವಾರದ ಮಾರುಕಟ್ಟೆ ಸ್ವಚ್ಛತೆ ಕಾಪಾಡುವುದು, ಬಿಎಸ್‌ವಿ ಶಾಲೆಯನ್ನು ಪುರಸಭೆ ಸುಪರ್ದಿಗೆ ತೆಗೆದುಕೊಳ್ಳುವುದು, ಕನ್ನಡ ಕಟ್ಟೆ ನಿರ್ಮಾಣ, ಕನ್ನಡ ಭವನ ನಿರ್ಮಾಣ ಮಾಡಬೇಕೆಂದು ಪದಾಧಿಕಾರಿಗಳು ಆಗ್ರಹಿಸಿದರು.

ಜನಿವಾರದವರ ಅಪರಕರ್ಮಗಳ ಮಂಟಪ ದುರಸ್ತಿ, ಕೊಠಡಿ ನಿರ್ಮಾಣ, ಬಿಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ರವಾನಿಸಬೇಕು. ಅಂಬೇಡ್ಕರ್ ವೃತ್ತ ಬಳಿಯ ಮದ್ಯದಂಗಡಿ ಸ್ಥಳಾಂತರಿಸಬೇಕು. 10ನೇವಾರ್ಡ್ ಶೌಚಗೃಹ ಧುನೀಕರಿಸಬೇಕು. ಪರಿಶಿಷ್ಟರ ಪರೀಕ್ಷೆ, ಸಂದರ್ಶನ ವೆಚ್ಚ ಭರಿಸಬೇಕು. ಅಂಬೇಡ್ಕರ್ ವೃತ್ತ ನವೀಕರಿಸಿ ಪುತ್ಥಳಿ ಸ್ಥಾಪಿಸಬೇಕು. ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು.

ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಮಾತನಾಡಿ, ಬಿಡಾಡಿ ದನಗಳು ರಸ್ತೆಯಲ್ಲಿ ನಿಲ್ಲದಂತೆ, ಬೀದಿಬದಿ ವ್ಯಾಪಾರಿಗಳು ರಸ್ತೆ ತಿಕ್ರಮಿಸದಂತೆ, ಪಾನಿಪೂರಿ ಮಾರಾಟ ಸ್ಥಳದಲ್ಲಿ ಸ್ವಚ್ಛತೆ ಕುರಿತು ಆರೋಗ್ಯ ನಿರೀಕ್ಷಕರು ಮುತುವರ್ಜಿ ವಹಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿದರು. ಉಪಾಧ್ಯಕ್ಷೆ ಸುಶೀಲಮ್ಮ, ಮುಖ್ಯಾಧಿಕಾರಿ ಕೆ.ದುರುಗಣ್ಣ, ಲೆಕ್ಕಿಗ ರಮೇಶ ಬೆಳಂಕರ್, ಪುರಸಭೆ ಸದಸ್ಯರು, ಸಂಘಟನೆಗಳ ಪದಾಧಿಕಾರಿಗಳು, ಪ್ರಮುಖರು ಪಾಲ್ಗೊಂಡಿದ್ದರು.