ಜಿಲ್ಲೆ

ವ್ಯಾಪಾರಿ ಕೊಂದವರಿಗೆ ಜೀವಾವಧಿ ಶಿಕ್ಷೆ

ರಾಣೆಬೆನ್ನೂರ: ಗೋಣಿ ಚೀಲದ ವ್ಯಾಪಾರಿಯೊಬ್ಬನನ್ನು ಕೊಲೆ ಮಾಡಿ ಆತನ ಬಳಿಯಿದ್ದ ಹಣ ಹಾಗೂ ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ಇಲ್ಲಿಯ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಎಸ್. ಜ್ಯೋತಿಶ್ರೀ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಹಿರೇಕೆರೂರ ತಾಲೂಕಿನ ಚಿನ್ನಮುಳಗುಂದ ಗ್ರಾಮದ ಸತೀಶ ನಾಗಪ್ಪ ಕುಬಸದ, ಕುಮಾರ ಬಸಪ್ಪ ಓಲೇಕಾರ, ಹನುಮಂತಪ್ಪ ಗುಡ್ಡಪ್ಪ ನಾಡ್ಲೇರ ಶಿಕ್ಷೆಗೊಳಗಾದ ಅಪರಾಧಿಗಳು.

ಇವರು 2014 ಆ. 24ರಂದು ಚಿನ್ನಮುಳಗುಂದ ಗ್ರಾಮದ ಗೋಣಿ ಚೀಲದ ವ್ಯಾಪಾರಿ ಚನ್ನಬಸಪ್ಪ ಗೋಕಾವಿ (85) ಎಂಬುವರ ಮನೆಗೆ ಹಣ ದೋಚಲು ಹೋಗಿದ್ದರು. ಈ ಸಮಯದಲ್ಲಿ ಚನ್ನಬಸಪ್ಪ ಎಚ್ಚರಗೊಂಡಾಗ, ಅವರ ತಲೆಗೆ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದರು.

ಕರೆ ಮಾಡಿ ಸಿಕ್ಕಿಬಿದ್ದರು: ಚನ್ನಬಸಪ್ಪ ಕೊಲೆಯಾದ ಬಳಿಕವೂ ಸಾಮಾನ್ಯ ಸಾವಾಗಿರಬಹುದು ಎಂಬ ಕಾರಣದಿಂದ ಮೊದಲಿಗೆ ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿರಲಿಲ್ಲ. ಕೆಲ ದಿನದ ಬಳಿಕ ಕೊಲೆ ಮಾಡಿದ 1ನೇ ಆರೋಪಿ ಸತೀಶ, ಚನ್ನಬಸಪ್ಪನ ಫೋನ್​ನಿಂದ ಗ್ರಾಮಸ್ಥರೊಬ್ಬರಿಗೆ ಕರೆ ಮಾಡಿ ಮಾತನಾಡಿದ್ದನು. ಈ ಬಗ್ಗೆ ಸಂಶಯಗೊಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಕೂಡಲೆ ಎಚ್ಚೆತ್ತ ಪೊಲೀಸರು ಸತೀಶನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿತ್ತು. ಈ ಕುರಿತು ಹಿರೇಕೆರೂರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸಾಕ್ಷ್ಯಾಧಾರಗಳ ಸಮೇತ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಈ ಹಿಂದಿನ ಸರ್ಕಾರಿ ಅಭಿಯೋಜಕ ಸದಾನಂದ ಶಿರೂರ ವಾದ ಮಂಡಿಸಿದ್ದರು.