ಬೈಲಹೊಂಗಲ ಬೀದಿ ಬದಿ ವ್ಯಾಪಾರಸ್ಥರ ಕುಂದು ಕೊರತೆಗಳ ಸಭೆಯಲ್ಲಿ ಉಪವಿಭಾಗಾಕಾರಿ ಪ್ರಭಾವತಿ ಫಕೀರಪೂರ ಮಾತನಾಡಿದರು. ವೀರೇಶ ಹಸಬಿ, ಸತೀಶ ಪಾಟೀಲ, ರಫೀಕ್ ಬಡೇಘರ ಇತರರು ಇದ್ದರು. 
ಜಿಲ್ಲೆ

ವ್ಯಾಪಾರಸ್ಥರ ಸಮಸ್ಯೆ ಪರಿಹಾರಕ್ಕೆ ಕ್ರಮ

ವಿಜಯವಾಣಿ ಸುದ್ದಿಜಾಲ ಬೈಲಹೊಂಗಲ
ಪಟ್ಟಣದ ಉಪವಿಭಾಗಾಕಾರಿಗಳ ಕಾರ್ಯಾಲಯದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಕುಂದುಕೊರತೆ ಸಭೆ ಬುಧವಾರ ಜರುಗಿತು.


ಬೀದಿ ಬದಿ ವ್ಯಾಪಾರಸ್ಥರ ಮುಖಂಡ ರಫೀಕ್ ಬಡೇಘರ ಮಾತನಾಡಿ, ಪುರಸಭೆ ಸಿಬ್ಬಂದಿಯಿಂದ ಬೀದಿ ಬದಿ ವ್ಯಾಪಾರಸ್ಥರ ಮೇಲೆ ವಿನಾಕಾರಣ ಕಿರುಕುಳ, ದಬ್ಬಾಳಿಕೆ ನಡೆಸುತ್ತಿದ್ದಾರೆ. ಯಾವುದೇ ಆದೇಶವಿಲ್ಲದೆ, ಯಾರಿಗೂ ಹೇಳದೆ, ಕೇಳದೆ ಏಕಾಏಕಿ ವ್ಯಾಪಾರಸ್ಥರ ಅಂಗಡಿಗಳನ್ನು ಎತ್ತಂಗಡಿ ಮಾಡಿ ತೊಂದರೆ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಪುರಸಭೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿಯಲ್ಲಿ ಪುರಸಭೆ ಮುಖ್ಯಾಕಾರಿ ಅವರೇ ಅಧ್ಯಕ್ಷರಾಗಿದ್ದು, ಸಭೆಯ ಒಳಗೆ ಚರ್ಚೆ ಮಾಡಿದ್ದ ವಿಷಯಗಳಿಗೆ ಇಲ್ಲಿಯವರೆಗೆ ಒಂದು ಪರಿಹಾರ ಮಾಡಿಲ್ಲ. 4 ವರ್ಷದಲ್ಲಿ ವರ್ಷಕ್ಕೊಂದು ಸಭೆ ಕರೆದು ಚರ್ಚಿಸಿದ ವಿಷಯಗಳ ಇಲ್ಲಿಯವರೆಗೂ ಒಂದು ಪರಿಹಾರ ಮಾಡಿಲ್ಲವೆಂದು ಆರೋಪಿಸಿದರು.


ಉಪವಿಭಾಗಾಕಾರಿ ಪ್ರಭಾವತಿ ಫಕೀರಪೂರ ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರಿಗೆ ಯಾವುದೇ ತೊಂದರೆ ಯಾಗದಂತೆ ವ್ಯಾಪಾರ ಮಾಡಲು ಸೂಚಿಸಲಾಗುವುದು. ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆಯಾಗುತ್ತಿದ್ದು, ಈ ಕುರಿತು ಅಕಾರಿಗಳ ಜತೆ ಚರ್ಚಿಸಿ ಸೂಕ್ತ ಪರಿಹಾರ ಮಾಡಲಾಗುವುದು. ಪುರಸಭೆ ಸಿಬ್ಬಂದಿಗಳು ಹಲ್ಲೆ ಮಾಡಿರುವುದು ಸರಿಯಾದ ಕ್ರಮವಲ್ಲ. ಹಂತವರ ಮೇಲೆ ಕ್ರಮ ಜರುಗಿಸಲಾಗುವುದು. ಶೀಘ್ರ ವ್ಯಾಪಾರಸ್ಥರ ಸಮಿತಿಯ ಸದಸ್ಯರ ಸಭೆ ಕರೆದು ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸಿಕೊಡಬೇಕೆಂದು ಮುಖ್ಯಾಕಾರಿಗೆ ತಿಳಿಸಿದರು.


ಸಿಪಿಐ ಪಂಚಾಕ್ಷರಿ ಸಾಲಿಮಠ ಮಾತನಾಡಿ, ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಟ್ರಾಫಿಕ್ ಸಮಸ್ಯೆ ಆಗದಂತೆ ವ್ಯಾಪಾರ ನಡೆಸಬೇಕು. ಏನೇ ತೊಂದರೆ, ಸಮಸ್ಯೆ ಬಂದರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದರು.
ಮುಖ್ಯಾಕಾರಿ ವೀರೇಶ ಹಸಬಿ, ಸತೀಶ ಪಾಟೀಲ, ವ್ಯಾಪಾರಸ್ಥರಾದ ಹಮ್ಮಜದ್ ನಂದಗಡ, ಮಹ್ಮದಲಿ ಬಾಗೇವಾಡಿ, ಮೆಹಬೂಬ್ ಬಾಗೇವಾಡಿ, ಗೊರೆಸಾಬ್ ಇತರರು ಇದ್ದರು.