ಕೃಷ್ಣ ಕುಲಕರ್ಣಿ ಕಲಬುರಗಿ
ಕರೊನಾ ಲಾಕ್ಡೌನ್ನಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಹಿಳೆಯೊಬ್ಬಳ ವ್ಯಾಪಾರ ಇದೀಗ ಸಾಮಾಜಿಕ ಜಾಲತಾಣಗಳ ನೆರವಿನಿಂದ ಭರ್ಜರಿಯಾಗಿ ಪುನರಾರಂಭಗೊಂಡಿದೆ.
ನೀಲಹಳ್ಳಿ ಗ್ರಾಮದ ವಿಜಯಲಕ್ಷ್ಮೀ ಪತಿ, ಇಬ್ಬರು ಪುತ್ರರು ಮತ್ತು ಒಬ್ಬಳು ಪುತ್ರಿಯೊಂದಿಗೆ ಸೇಡಂನಲ್ಲಿ ಬಾಡಿಗೆ ಮನೆಯಲ್ಲಿದ್ದು, ಭಾಗ್ಯವಂತಿ ಹೆಸರಿನ ಖಾನಾವಳಿ(ಭೋಜನಾಲಯ) ನಡೆಸುತ್ತ ನೆಮ್ಮದಿ ಜೀವನ ಸಾಗಿಸುತ್ತಿದ್ದರು. ಆದರೆ ಕರೊನಾ ವೈರಸ್ ತಡೆಗಾಗಿ ಲಾಕ್ಡೌನ್ ಹೇರಿಕೆಯಾಗುತ್ತಲೇ ಖಾನಾವಳಿ ಬಂದ್ ಆಗಿ ಸಂಸಾರ ಸಾಗುವುದು ಕಷ್ಟಕರವಾಗಿತ್ತು.
ಏನು ಮಾಡೋದು ಎಂದು ಹಣೆ ಮೇಲೆ ಕೈ ಹೊತ್ತು ಕುಳಿತಾಗ ನೆರವಿಗೆ ಬಂದಿದ್ದು ಎನ್ಜಿಒ ಸಂಸ್ಥೆ. ದೆಹಲಿ ಮೂಲದ ಸಂಸ್ಥೆಯೊಂದು ವಿಜಯಲಕ್ಷ್ಮೀ ಸೇರಿ ಇತರ ಮಹಿಳೆಯರಿಗೆ ಹೇಗೆ ವ್ಯಾಪಾರ ನಡೆಸಬೇಕು? ಗ್ರಾಹಕರ ಜತೆ ವ್ಯವಹರಿಸುವುದು ಹೇಗೆ ಎಂಬ ಬಗ್ಗೆ ಆನ್ಲೈನ್ ಮೂಲಕ ತರಬೇತಿ ನೀಡಿತು. ಇದು ವಹಿವಾಟು ಮರು ಆರಂಭಕ್ಕೆ ಒಂದಿಷ್ಟು ಸಹಕಾರಿ ಆಯಿತು.
ಇನ್ನು ಖಾನಾವಳಿ ಬಂದ್ ಆಗಿದ್ದರಿಂದ ತಿಂಗಳ ಬಾಡಿಗೆ ಕಟ್ಟಲು ಪರದಾಡುವಾಗ ಟ್ವಿಟರ್ ಹಾಗೂ ಫೇಸ್ಬುಕ್ ವಿಜಯಲಕ್ಷ್ಮೀ ನೆರವಿಗೆ ಬಂದವು. ದೇಶದ ವಿವಿಧ ಪ್ರದೇಶಗಳ ಪ್ರಮುಖ ಆಹಾರ, ಬಟ್ಟೆ, ಕಲೆ- ಸಂಸ್ಕೃತಿ ಇತರ ವಿಶೇಷತೆಗಳ ಮೇಲೆ ಬೆಳಕು ಚೆಲ್ಲುವ `ಇಂಡಿಯನ್ ರೂಟ್' ಎಂಬ ಗ್ರೂಪ್ ವಿಜಯಲಕ್ಷ್ಮೀ ಅವರ ಜೋಳದ ರೊಟ್ಟಿ ವ್ಯವಹಾರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹರಿಬಿಟ್ಟಿತ್ತು. ಇದನ್ನು ಗಮನಿಸಿದ ಬಹುತೇಕರು ಟ್ವಿಟರ್ ಹಾಗೂ ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದರಿಂದ ನೆಲಕಚ್ಚಿದ್ದ ವ್ಯಾಪಾರ ಮತ್ತೆ ಆರಂಭವಾಯಿತು. ನಿತ್ಯ ಸಾಕಷ್ಟು ಕರೆಗಳು ಬರುತ್ತಿದ್ದು, ಪಾರ್ಸಲ್ ಕೊಂಡೊಯ್ಯಲಾಗುತ್ತಿದೆ. ಕೇವಲ ಸೇಡಂಗೆ ಸೀಮಿತವಾಗಿದ್ದ ವಿಜಯಲಕ್ಷ್ಮೀ ಇದೀಗ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ರಾಷ್ಟ್ರದುದ್ದಕ್ಕೂ ಸದ್ದು ಮಾಡುವಂತಾಗಿದೆ.
ಸರ್ಕಾರದಿಂದ ಬೇಕಿದೆ ನೆರವು
ಖಾನಾವಳಿ ನಡೆಯದ್ದರಿಂದ ವಿಜಯಲಕ್ಷ್ಮೀ ಮನೆಯಲ್ಲೇ ರೊಟ್ಟಿ ಕೇಂದ್ರ ಆರಂಭಿಸಿದ್ದು, ಬೇಕಿದ್ದವರಿಗೆ ರೊಟ್ಟಿ, ಶೇಂಗಾ ಹಿಂಡಿ ಇತರ ಆಹಾರ ಪದಾರ್ಥಗಳನ್ನು ಕಳಿಸಿಕೊಡುತ್ತಿದ್ದಾರೆ. ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಇತರ ರಾಜ್ಯಗಳಿಂದ ಆರ್ಡರ್ಗಳು ಬರುತ್ತಿದೆ. ರಾಜ್ಯದ ಬೆಂಗಳೂರು, ಮಂಗಳೂರು, ಮೈಸೂರು ಸೇರಿ ಬಹುತೇಕ ಕಡೆಗಳಿಂದ ಜನರು ಕರೆ ಮಾಡಿ ತಮಗಿಷ್ಟದ ಪದಾರ್ಥ ತರಿಸಿಕೊಳ್ಳುತ್ತಿದ್ದಾರೆ. ತಮ್ಮ ವ್ಯಾಪಾರ ವೃದ್ಧಿಗೆ ಸಕರ್ಾರದ ನೆರವು ಬೇಕಿದೆ ಎನ್ನುತ್ತಾರೆ ವಿಜಯಲಕ್ಷ್ಮೀ.
ನೀವೂ ಆರ್ಡರ್ ಮಾಡಿ
ಉತ್ತರ ಕರ್ನಾಟಕದ ಖಡಕ್ ಜೋಳದ ರೊಟ್ಟಿ, ಶೇಂಗಾ ಹಿಂಡಿ, ಶೇಂಗಾ ಹೋಳಿಗೆ, ಬೆಳ್ಳುಳ್ಳಿ ಪುಡಿ ಇತರ ರುಚಿಕರ ಖಾದ್ಯಗಳಿಗಾಗಿ ವಿಜಯಲಕ್ಷ್ಮೀ (99005 82465) ಅವರನ್ನು ಸಂಪರ್ಕಿಸಬಹುದು.
ಸೇಡಂನಲ್ಲಿ ಖಾನಾವಳಿ ನಡೆಸಿ ಉತ್ತಮ ಜೀವನ ಸಾಗಿಸುತ್ತಿದ್ದೇವು. ಆದರೆ ಕರೊನಾ ವೈರಸ್ನಿಂದಾಗಿ ವ್ಯಾಪಾರ ನೆಲಕಚ್ಚಿತು. ಆಗ ಬೆಂಗಳೂರಿನ ಚಂದನಾ ಮೇಡಂ ಎಂಬುವರ ನೇತೃತ್ವದಲ್ಲಿ ವ್ಯಾಪಾರದ ಬಗ್ಗೆ ಟ್ರೇನಿಂಗ್ ನೀಡಿದ್ದಲ್ಲದೆ ಎಲ್ಲ ಕಡೆ ನನ್ನ ರೊಟ್ಟಿ ವ್ಯಾಪಾರದ ಬಗ್ಗೆ ಹೇಳಿದ್ರು. ಇದೀಗ ನಿತ್ಯ 10-15 ಕರೆ ಬರುತ್ತಿವೆ. ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ.
| ವಿಜಯಲಕ್ಷ್ಮೀ
ರೊಟ್ಟಿ ವ್ಯಾಪಾರಿ ಸೇಡಂ
ಸಾಬ್ರೆ, ನಾವೆಲ್ಲರೂ ಅಮ್ಮನ ಜತೆಗಿದ್ದೇವೆ. ನಾನು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಾಲ್ಕೈದು ದಿನಗಳಿಂದ ಎಲ್ಲೆಡೆ ಅಮ್ಮನ ಪೋಸ್ಟ್ ವೈರಲ್ ಆಗ್ತಿದ್ದು, ಆರ್ಡರ್ ಹೆಚ್ಚಾಗಿ ಬರ್ತಿವೆ. ನಮ್ಮದು ನೀಲಹಳ್ಳಿ ಎಂಬ ಪುಟ್ಟ ಗ್ರಾಮವಾಗಿದ್ದು, ಸ್ವಂತ ಮನೆಯಿಲ್ಲ. ಹಳ್ಳಿಯಲ್ಲಿ ಮನೆ ಕಟ್ಟಲು 10 ವರ್ಷಗಳಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಅರ್ಜಿ ಹಾಕಿದರೂ ಸಾಲಸೌಲಭ್ಯ ಸಿಕ್ಕಿಲ್ಲ.
| ಶಿವಕುಮಾರ
ವಿಜಯಲಕ್ಷ್ಮೀ ಪುತ್ರ
ಕಷ್ಟದಲ್ಲಿರುವ ವಿಜಯಲಕ್ಷ್ಮೀ ಅವರಿಗೆ ಕಲಬುರಗಿಯಲ್ಲಿ ಇರಲು ಮನೆ ಹಾಗೂ ವ್ಯಾಪಾರ ನಡೆಸಲು ಸ್ಥಳ ನೀಡಲು ಸಿದ್ಧ. ಇದೀಗ ಅವರು ಸೇಡಂನಲ್ಲಿದ್ದು, ಕಲಬುರಗಿಗೆ ಬರುವುದಾದರೆ ನಮ್ಮಿಂದಾಗುವ ಸಹಾಯ ಮಾಡುವೆ.
| ಲಿಂಗರಾಜಪ್ಪ ಅಪ್ಪ, ಉದ್ಯಮಿ (ಟ್ವಿಟರ್ನಲ್ಲಿ ಹೇಳಿದ್ದು)