ರಾಣೆಬೆನ್ನೂರ: ಇಲ್ಲಿಯ ಎಪಿಎಂಸಿ ಮಾರುಕಟ್ಟೆ, ಹಮಾಲರ ಬದುಕು, ಬೀದಿ ಬದಿಯ ವ್ಯಾಪಾರಸ್ಥರು, ಜಾನುವಾರು ಮಾರುಕಟ್ಟೆ ಸೇರಿ ಜನಸಂದಣಿ ಪ್ರದೇಶಗಳಲ್ಲಿ ಕರೊನಾ ಕರಿನೆರಳು ಬಿದ್ದಿದೆ.
ಎಪಿಎಂಸಿಯ ತರಕಾರಿ, ಜಾನುವಾರು ಮಾರುಕಟ್ಟೆಯನ್ನು ಒಂದು ವಾರದಿಂದ ಬಂದ್ ಮಾಡಲಾಗಿದ್ದು, ರೈತರು ಹಾಗೂ ವ್ಯಾಪಾರಸ್ಥರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಅಲ್ಲದೆ, ವ್ಯಾಪಾರ, ವಹಿವಾಟು ಸ್ಥಗಿತಗೊಂಡಿದ್ದರಿಂದ ಹಮಾಲರ ಬದುಕು ಅತಂತ್ರ ಸ್ಥಿತಿಗೆ ತಲುಪಿದೆ.
ಬೀದಿ ಬದಿಯ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ ಪರಿಣಾಮ ಬೀದಿಬದಿ ವ್ಯಾಪಾರಸ್ಥರು ಪರದಾಡುವಂತಾಗಿದೆ. ಆದರೆ, ಶಾಪಿಂಗ್ ಮಾಲ್, ನಗರದಲ್ಲಿನ ಬೃಹತ್ ಮಳಿಗೆ ಹಾಗೂ ಹೋಟೆಲ್ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.
ಎಪಿಎಂಸಿ ಸ್ತಬ್ಧ: ನಗರದ ಎಪಿಎಂಸಿಗೆ ನಿತ್ಯವೂ 2 ಸಾವಿರ ಕ್ವಿಂಟಾಲ್ಗೂ ಅಧಿಕ ಮೆಕ್ಕೆಜೋಳ, ಸಾವಿರಾರು ಹತ್ತಿ ಅಂಡಿಗೆಗಳು ಬರುತ್ತಿದ್ದವು. ಆದರೆ, ಕರೊನಾ ಭೀತಿ ಹಿನ್ನೆಲೆಯಲ್ಲಿ 100 ಕ್ವಿಂಟಾಲ್ ಮೆಕ್ಕೆಜೋಳ ಬಂದರೆ ಹೆಚ್ಚು ಎನ್ನುವ ಪರಿಸ್ಥಿತಿ ನಿರ್ವಣವಾಗಿದೆ. ಸಂಪೂರ್ಣ ಮಾರುಕಟ್ಟೆ ಜನರಿಲ್ಲದೇ ಬಿಕೋ ಎನ್ನುತ್ತಿದೆ.
ಎಪಿಎಂಸಿಯಲ್ಲಿರುವ 500ಕ್ಕೂ ಹಮಾಲರು ನಿತ್ಯದ ಕೂಲಿ ಆಧರಿಸಿ ಜೀವನ ನಡೆಸುತ್ತಿದ್ದರು. ಇದೀಗ ವ್ಯಾಪಾರ-ವಹಿವಾಟು ಸ್ಥಗಿತಗೊಂಡಿದ್ದರಿಂದ ಕೂಲಿಯೇ ಇಲ್ಲದಂತಾಗಿದೆ. ‘ನಿತ್ಯವೂ 500ಯಿಂದ 600 ರೂ. ತೆಗೆದುಕೊಂಡು ಮನೆಗೆ ಹೋಗುತ್ತಿದ್ದೆವು. ಆದರೀಗ 50 ರೂ. ಕೂಲಿ ಸಹ ದೊರೆಯುತ್ತಿಲ್ಲ. ಹೀಗಾಗಿ ಜೀವನ ನಡೆಸುವುದೇ ಕಷ್ಟವಾಗಿದೆ. ಕಿರಾಣಿ ಅಂಗಡಿಯಲ್ಲಿ ಸಾಲದ ರೂಪದಲ್ಲಿ ದಿನಸಿ ತಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವೆ’ ಎಂದು ಭೀಮಪ್ಪ ಎಂಬುವರು ‘ವಿಜಯವಾಣಿ’ ಎದುರು ಅಳಲು ತೋಡಿಕೊಂಡರು.
ಲಕ್ಷಾಂತರ ರೂ. ವ್ಯವಹಾರ ಸ್ಥಗಿತ:
ಭಾನುವಾರಕ್ಕೊಂದು ಬಾರಿ ನಡೆಯುವ ಇಲ್ಲಿಯ ಜಾನುವಾರು ಮಾರುಕಟ್ಟೆಗೆ ಎತ್ತು, ಎಮ್ಮೆ, ಆಕಳು, ಕುರಿ, ಮೇಕೆ ಸೇರಿ ಸಾವಿರಕ್ಕೂ ಅಧಿಕ ಜಾನುವಾರುಗಳ ಮಾರಾಟ ನಡೆಯುತ್ತಿತ್ತು. 1.70 ಕೋಟಿ ರೂ.ನಷ್ಟು ವ್ಯಾಪಾರ ನಡೆಯುತ್ತಿತ್ತು. ಇದು ಕೂಡ ಸ್ಥಗಿತಗೊಂಡಿದೆ.
ಕೋರ್ಟ್ನಲ್ಲಿ ವಕೀಲರಿಗೆ ಮಾತ್ರ ಪ್ರವೇಶ: ಕರೊನಾ ವೈರಸ್ ತಡೆಗಟ್ಟುವ ಸಲುವಾಗಿ ಇಲ್ಲಿಯ ಕೋರ್ಟ್ನಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ವಕೀಲರಿಗೆ ಮಾತ್ರ ಪ್ರವೇಶ ನೀಡಲಾಗಿದ್ದು, ಮುಂದಿನ ಆದೇಶ ಬರುವವರೆಗೂ ಆರೋಪಿ, ವಾದಿ-ಪ್ರತಿವಾದಿ, ಸಾಕ್ಷಿದಾರರಿಗೆ ವಾರಂಟ್ ಜಾರಿ ಮಾಡದಂತೆ ತಿಳಿಸಲಾಗಿದೆ ಎಂದು ಸರ್ಕಾರಿ ಅಭಿಯೋಜಕ ಸದಾನಂದ ಶಿರೂರ ತಿಳಿಸಿದ್ದಾರೆ.
ಕರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ದಿಸೆಯಲ್ಲಿ ನಗರದ ಮಾಲ್, ಬೃಹತ್ ಮಳಿಗೆ ಬಂದ್ ಮಾಡಲು ಸೂಚಿಸಲಾಗಿದೆ. ಮಾಂಸಾಹಾರಿ ಹೋಟೆಲ್ಗಳನ್ನು ಬಂದ್ ಮಾಡಿಸಲಾಗಿದೆ. ಸಸ್ಯಹಾರಿ ಹೋಟೆಲ್ನವರು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಅವರಿಂದಲೂ ಸಮಸ್ಯೆ ಆದರೆ ಎಲ್ಲವನ್ನೂ ಬಂದ್ ಮಾಡಿಸಲಾಗುವುದು. | ಬಸನಗೌಡ ಕೋಟೂರು, ತಹಸೀಲ್ದಾರ್