ಜಿಲ್ಲೆ

ವ್ಯಾಪಾರ ಪರವಾನಗಿ ಸರಳೀಕರಣ

ಮೈಸೂರು: ನಗರಪಾಲಿಕೆಯಿಂದ ನೀಡುವ ವ್ಯಾಪಾರ ಪರವಾನಗಿ ವ್ಯವಸ್ಥೆಯನ್ನು ಸರಳೀಕರಣಗೊಳಿಸಲಾಗಿದೆ ಎಂದು ಮೇಯರ್ ಶಿವಕುಮಾರ್ ತಿಳಿಸಿದರು.


ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ವ್ಯಾಪಾರ ಕ್ಷೇತ್ರದ ವಿವಿಧ ಸಂಘಟನೆಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.


ನಗರದಲ್ಲಿ ವ್ಯಾಪಾರಸ್ಥರಿಗೆ ವ್ಯಾಪಾರ ಪರವಾನಗಿ ಪಡೆಯಲು ಇದ್ದ ವ್ಯವಸ್ಥೆಯನ್ನು ಸರಳಗೊಳಿಸಲಾಗಿದೆ. ಇನ್ನು ಮುಂದೆ ವ್ಯಾಪಾರಸ್ಥರು, ಪಾಲಿಕೆ ಕಚೇರಿಗೆ ಅಲೆಯುವುದು ತಪ್ಪಲಿದೆ. ತಾವಿರುವ ಸ್ಥಳದಲ್ಲಿಯೇ ತಮ್ಮ ವ್ಯಾಪಾರ ಪರವಾನಗಿ ಸಂಖ್ಯೆ ನಮೂದಿಸಿ ತೆರಿಗೆ ಪಾವತಿಸಬಹುದು. ಪಾವತಿಯ ರಸೀದಿಯ ಪ್ರತಿ ಕೂಡ ತೆಗೆದುಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.


ವ್ಯಾಪಾರ ಪರವಾನಗಿ ಮೂಲಕ ಆನ್‌ಲೈನ್ ವ್ಯವಸ್ಥೆ ಸರಳೀಕರಣಗೊಳಿಸಿರುವ ಬಗ್ಗೆ ವ್ಯಾಪಾರಸ್ಥರ ಸಂಘಟನೆಗಳ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ 19 ಸಾವಿರ ಜನರಿಗೆ ಪರವಾನಗಿದಾರರನ್ನು ಗುರುತಿಸಲಾಗಿದೆ. 10,500 ಜನರು ವ್ಯಾಪಾರಸ್ಥರನ್ನು ಆನ್‌ಲೈನ್ ತೆರಿಗೆ ಪಾವತಿ ವ್ಯವಸ್ಥೆಗೆ ಅಪ್‌ಲೋಡ್ ಮಾಡಲಾಗಿದ್ದು, ಉಳಿದವುಗಳನ್ನು ಸಹ ಅಪ್‌ಲೋಡ್ ಮಾಡಲಾಗುವುದು ಎಂದು ತಿಳಿಸಿದರು.


ಆನ್‌ಲೈನ್ ಮೂಲಕ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ ಅವರು, ಕೆಲ ವ್ಯಾಪಾರಸ್ಥರಿಗೆ ಆನ್‌ಲೈನ್ ಮೂಲಕ ತೆರಿಗೆ ಪಾವತಿಯ ಪ್ರತಿಯನ್ನು ಸಭೆಯಲ್ಲಿ ನೀಡಿದರು.


ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಮಾತನಾಡಿ, ಸಿಆರ್ ಪಡೆಯದ ಕಟ್ಟಡದಲ್ಲಿರುವ ವಾಣಿಜ್ಯ ಮಳಿಗೆಗಳಿಗೆ ದುಪ್ಪಟ್ಟು ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದು ಹೊರೆಯಾಗಿದೆ. ಹೆಚ್ಚುವರಿ ಶುಲ್ಕ ವಿಧಿಸವುದನ್ನು ಸರಿಪಡಿಸುವ ಮೂಲಕ ವ್ಯಾಪಾರಸ್ಥರ ಆರ್ಥಿಕ ನಷ್ಟವನ್ನು ಕಡಿಮೆ ಮಾಡಬೇಕು ಎಂದು ಕೋರಿದರು.


ಮೈಸೂರು ಟ್ರೇಡರ್ಸ್ ಸುರಕ್ಷಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಪ್ರಶಾಂತ್‌ಗೌಡ ಮಾತನಾಡಿ, ಟ್ರೇಡ್ ಲೈಸೆನ್ಸ್ ಶುಲ್ಕವನ್ನು ಯಾವ ಮಾನದಂಡದ ಮೇಲೆ ನಿಗದಿಪಡಿಸಲಾಗಿದೆ ಎಂಬುದನ್ನು ತಿಳಿಸುವ ಮೂಲಕ ಆಗಿರುವ ಲೋಪದೋಷ ಸರಿಪಡಿಸಬೇಕು ಎಂದು ಹೇಳಿದರು.


ಉಪಮೇಯರ್ ಡಾ.ರೂಪಾ ಯೋಗೇಶ್, ಸದಸ್ಯೆ ಅಶ್ವಿನಿ ಅನಂತು, ಆಯುಕ್ತ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಮಾಜಿ ಮೇಯರ್ ಅಯೂಬ್‌ಖಾನ್, ಆರೋಗ್ಯಾಧಿಕಾರಿ ಡಾ.ನಾಗರಾಜು, ಸಂಘ-ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಪ್ರಶಾಂತ್, ಮೈಸೂರು ಕಲ್ಯಾಣ ಮಂಟಪಗಳ ಮಾಲೀಕರ ಸಂಘದ ಅಧ್ಯಕ್ಷ ಸತ್ಯನಾರಾಯಣ್ ಸೇರಿದಂತೆ ವಿವಿಧ ವ್ಯಾಪಾರಿ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.