ಹುಬ್ಬಳ್ಳಿ: ಕರೊನಾ ಲಸಿಕೆಗೆ ಈಗ ದೇಶಾದ್ಯಂತ ಹಾಹಾಕಾರ ಶುರುವಾಗಿದೆ. ಇದೇ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸೈಬರ್ ಕಳ್ಳರು ವಂಚನೆಗೆ ಹೊಂಚು ಹಾಕಿ ಕುಳಿತಿದ್ದಾರೆ. ಅಪರಿಚಿತರಿಗೆ ಕರೆ ಮಾಡಿ, ‘ನಿಮ್ಮ ಮನೆಗೇ ಬಂದು ಲಸಿಕೆ ಹಾಕುತ್ತೇವೆ’ ಎಂದು ನಂಬಿಸಿ ಆಧಾರ್ ಸಂಖ್ಯೆ, ಒಟಿಪಿ ಪಡೆದು ಲಕ್ಷ ಲಕ್ಷ ರೂ. ಎಗರಿಸುವ ಸೈಬರ್ ಕಳ್ಳರ ಜಾಲವೊಂದು ಈಗ ಸಕ್ರಿಯವಾಗಿದೆ.
ವಂಚಕರು ಹೇಗೋ ಜನರ ಮೊಬೈಲ್ಫೋನ್ ನಂಬರ್ಗಳನ್ನು ಸಂಗ್ರಹಿಸಿ ಕರೆ ಮಾಡುತ್ತಾರೆ. ‘ನೀವು ಲಸಿಕೆ ತೆಗೆದುಕೊಂಡಿದ್ದೀರಾ ? ನಿಮ್ಮ ಮನೆಯಲ್ಲಿ ಯಾರಾದರೂ ತೆಗೆದುಕೊಳ್ಳುವವರಿದ್ದಾರಾ ? ಹೊರಗಡೆ ಲಸಿಕಾ ಕೇಂದ್ರದಲ್ಲಿ ತೆಗೆದುಕೊಳ್ಳುತ್ತೀರಾ ಅಥವಾ ಮನೆಯಲ್ಲೇ ಲಸಿಕೆ ಹಾಕಿಸುತ್ತೀರಾ’ ಎಂದು ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಾರೆ. ಇದಕ್ಕೇನಾದರೂ ನೀವು ಸ್ಪಂದಿಸಿದರೆ ಮುಗೀತು.
‘ಲಸಿಕೆಗಾಗಿ ಹೆಸರು ನೋಂದಾಯಿಸಬೇಕಿದೆ’ ಎಂದು ನಂಬಿಸಿ ಆಧಾರ್ ಕಾರ್ಡ್ ನಂಬರ್ ಪಡೆಯುತ್ತಾರೆ. ನಂತರ ನಿಮ್ಮ ಮೊಬೈಲ್ಫೋನ್ಗೆ ಬಂದಿರುವ ಒಟಿಪಿ ಪಡೆಯುತ್ತಾರೆ. ನಿಮ್ಮ ಮೊಬೈಲ್ಫೋನ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದರೆ, ಆ ಖಾತೆಯಲ್ಲಿರುವ ಎಲ್ಲ ಹಣವನ್ನು ಆನ್ಲೈನ್ ಆಪ್ಗಳ ಮೂಲಕ ಸಲೀಸಾಗಿ ದೋಚುತ್ತಾರೆ. ಈಗಾಗಲೇ ಮುಂಬೈ, ಲಖನೌದಲ್ಲಿ ಸಾಕಷ್ಟು ಜನ ಮೋಸ ಹೋಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ವಂಚಕರು ವೃದ್ಧರನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿದ್ದಾರೆ.
ಹೀಗೆ ಅಪರಿಚಿತರು ಯಾರಾದರೂ ಕರೆ ಮಾಡಿ ಲಸಿಕೆ ಬಗ್ಗೆ ಮಾಹಿತಿ ಕೇಳಿದರೆ ಮಾಹಿತಿ ನೀಡಬೇಡಿ, ಹುಷಾರಾಗಿರಿ. ನಾವು ಈಗಾಗಲೇ ನೋಂದಣಿ ಮಾಡಿಸಿದ್ದೇವೆ ಎಂದು ಹೇಳಿ. ಸಂಶಯ ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ಸೈಬರ್ ಕ್ರೖೆಂ ಪೊಲೀಸರು ಜಾಗೃತಿ ಮೂಡಿಸುತ್ತಿರುವ ಸಂದೇಶದ ಆಡಿಯೋ ಈಗ ವೈರಲ್ ಆಗುತ್ತಿದೆ.
ಆಕ್ಸಿಜನ್, ಶುಗರ್ ಟೆಸ್ಟ್ ಆಪ್ ಮೂಲಕ ದಂಧೆ
ಆಕ್ಸಿಜನ್, ಬಿಪಿ, ಶುಗರ್ ಪರೀಕ್ಷೆ ಮಾಡುವ ಆಪ್ಗಳ ಕುರಿತ ಜಾಹೀರಾತನ್ನು ಸಾಮಾಜಿಕ ಜಾಲತಾಣಗಳಲ್ಲಿ ವಂಚಕರು ನೀಡುತ್ತಾರೆ. ಈ ಆಪ್ ಡೌನ್ಲೋಡ್ ಮಾಡಿಕೊಂಡು ಬಳಸಲು ಮುಂದಾದರೆ, ಅದರಲ್ಲಿ ಹೆಬ್ಬೆರಳು ಒತ್ತುವ ಅವಕಾಶ ಇಟ್ಟಿರುತ್ತಾರೆ. ಇದರಿಂದ ಹೆಬ್ಬೆರಳ ಗುರುತು ಕದ್ದು ಆಧಾರ್ ಲಿಂಕ್ಗೆ ನೀಡಿರುವ ಬ್ಯಾಂಕ್ ಖಾತೆಯ ಮಾಹಿತಿ ಪಡೆದು ವಂಚಿಸುತ್ತಾರೆ.
ವ್ಯಾಕ್ಸಿನ್ ಕೊಡಿಸುವುದಾಗಿ ವಂಚಿಸಿರುವ ಪ್ರಕರಣಗಳು ಬೇರೆಡೆ ವರದಿಯಾಗಿವೆ. ಆದರೆ, ನಮ್ಮ ವ್ಯಾಪ್ತಿಯಲ್ಲಿ ಈವರೆಗೆ ಇಂತಹ ಯಾವುದೇ ದೂರು ಬಂದಿಲ್ಲ. ಈ ರೀತಿ ವಂಚಿಸುವ ಸಾಧ್ಯತೆಗಳಿದ್ದು, ಸಾರ್ವಜನಿಕರು ಜಾಗೃತರಾಗಿರಬೇಕು. ಯಾರೊಂದಿಗೂ ಆಧಾರ್, ಬ್ಯಾಂಕ್ ಖಾತೆ ಸಂಖ್ಯೆ, ಒಟಿಪಿ ಮತ್ತಿತರ ಖಾಸಗಿ ಮಾಹಿತಿ ಹಂಚಿಕೊಳ್ಳಬಾರದು.| ಕೆ. ರಾಮರಾಜನ್ ಡಿಸಿಪಿ (ಕಾನೂನು ಸುವ್ಯವಸ್ಥೆ)
ಜಾರ್ಖಂಡ್ ಜಾಲ ಸಕ್ರಿಯ ?
ಲಸಿಕೆ ಹಾಕುತ್ತೇವೆ ಎಂದು ಕರೆ ಮಾಡುವ ಜಾರ್ಖಂಡ್ ಮೂಲದ ಜಾಲವೊಂದು ಸಕ್ರಿಯವಾಗಿದೆ. ಹಿಂದಿ ಭಾಷೆಯಲ್ಲಿ ಮಾತನಾಡುತ್ತಾರೆ. ಆಧಾರ್ ಸಂಖ್ಯೆ, ಒಟಿಪಿ ಪಡೆದು ವಂಚಿಸುತ್ತಾರೆ. ಹಾಗಾಗಿ, ಇಂತಹ ಕರೆಗಳಿಂದ ಎಚ್ಚರದಿಂದ ಇರಬೇಕು ಎಂದು ಸೈಬರ್ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ.
ರಕ್ಷಣೆ ಹೇಗೆ ?
ಅಪರಿಚಿತರಿಗೆ ಯಾವುದೇ ಖಾಸಗಿ ಮಾಹಿತಿ ನೀಡಬೇಡಿ
ಲಸಿಕೆ ಪಡೆಯಲು ಸರ್ಕಾರದ ವೆಬ್ಸೈಟ್ ಮಾತ್ರ ಬಳಸಿ
ಗೂಗಲ್ನಲ್ಲಿ ಸಿಗುವ ಮಾಹಿತಿಯನ್ನು ಪರಿಶೀಲಿಸಿ
ಅನಗತ್ಯವಾಗಿ ಅಸುರಕ್ಷಿತ ಆಪ್ ಡೌನ್ಲೋಡ್ ಮಾಡದಿರಿ
ಅಧಿಕೃತ ಸರ್ಕಾರಿ ವೆಬ್ಸೈಟ್, ದೂರವಾಣಿ ಮೂಲಕ ಹೆಚ್ಚಿನ ಮಾಹಿತಿ ಪಡೆಯಿರಿ