ಜಿಲ್ಲೆ

ವ್ಯಸನಮುಕ್ತ ಅಭಿಯಾನ ಶ್ಲಾಘನೀಯ

ನಿಪ್ಪಾಣಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜಾರಿಗೆ ತರಲಾದ ಮಾನಸಿಕ ಪರಿವರ್ತನೆಯ ಮೂಲಕ ವ್ಯಸನ ಮುಕ್ತಿ ಅಭಿಯಾನವು ಶ್ಲಾಘನೀಯ. ಈ ಶಿಬಿರದಿಂದ ನಗರದಲ್ಲಿರುವ ಸುಮರು ೪೩ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ಇಲ್ಲಿನ ವನಶೆಟ್ಟಿ ಪಾರ್ಕ್ನಲ್ಲಿರುವ ಇಂಜಿನಿಯರ್ ಬಿ.ಆರ್.ಪಾಟೀಲ ಮೆಮೋರಿಯಲ್ ಹಾಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ವ್ಯಸನಮುಕ್ತ ಅಭಿಯಾನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ವ್ಯಸನದಿಂದ ಅನೇಕ ಜೀವಗಳು ನಾಶವಾದ ಉದಾಹರಣೆಗಳಿವೆ. ಇದನ್ನು ತಪ್ಪಿಸಲು ಧರ್ಮಸ್ಥಳ ಸಂಸ್ಥೆ ಅನುಕರಣೀಯ ಸಾಮಾಜಿಕ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದರು.

ಯೋಜನೆಯ ಪ್ರಾದೇಶಿಕ ನಿರ್ದೇಶಕಿ ದಯಾಶೀಲ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ದೇಶದಲ್ಲಿ ಮಾನವೀಯ ಆಂದೋಲನ ನಿರ್ಮಿಸಿದೆ. ಮನೆ ಕಳೆದುಕೊಂಡು ನಿರಾಶ್ರಿತರಾದ ಅನೇಕ ಕುಟುಂಬಗಳಿಗೆ ಮನೆ ನಿರ್ಮಿಸಿ ಅವರಲ್ಲಿ ಸಂತೋಷ ಸೃಷ್ಟಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ವಿರೂಪಾಕ್ಷಲಿಂಗ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ ಮಾತನಾಡಿ, ವ್ಯಸನ ಸಮಾಜದಲ್ಲಿ ಒಂದು ಸಂಕೀರ್ಣ ಸಮಸ್ಯೆಯಾಗಿ ಮಾರ್ಪಟ್ಟಿದೆ. ಜನರು ವ್ಯಸನದಿಂದ ಮುಕ್ತರಾಗಲು ಸಹಾಯ ಮಾಡುತ್ತಿರುವ ಧರ್ಮಸ್ಥಳ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ಮಹಾದೇವ ಬರಗಾಲೆ, ನೀತಾ ಮೈಶಾಳೆ, ಎಲ್.ಬಿ. ಖೋತ ಮಾತನಾಡಿದರು. ವ್ಯಸನ ಮುಕ್ತ ಶಿಬಿರಾರ್ಥಿಗಳು ಶಿಬಿರದ ಕುರಿತು ತಮ್ಮ ಅನುಭವ ಹಂಚಿಕೊಂಡರು.

ನಗರಸಭೆ ಉಪಾಧ್ಯಕ್ಷ ಸಂತೋಷ ಸಾಂಗಾವಕರ, ಸದಸ್ಯ ರಾಜು ಗುಂದೇಶಾ, ಸಂದೀಪ ಸಂಕಪಾಳ, ದಿಗ್ವಿಜಯ ನಿಂಬಾಳಕರ, ಬಾಬಾಸಾಹೇಬ ಪವಾರ, ಅಶೋಕ ಮಗದುಮ್, ಸಂಸ್ಥೆಯ ಮೇಲ್ವಿಚಾರಕಿ ಶ್ರೀದೇವಿ ಪಾಟೀಲ, ಲಕ್ಷ್ಮಿ ಮಗದುಮ್, ಸುರೇಶ ಹಾಲವಾರ, ಯಶವಂತ ಕಾಂಬಳೆ, ದಯಾಶೀಲ ಇತರರಿದ್ದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಽಕಾರಿ ಮಂಜುನಾಥ ಎಚ್. ಸ್ವಾಗತಿಸಿದರು.