ಮೈಸೂರು: ಮನುಷ್ಯನ ದೇಹವೇ ದೇಗುಲ. ಇದನ್ನು ದುಶ್ಚಟಗಳ ವ್ಯಸನದಿಂದ ಹಾಳು ಮಾಡಿಕೊಳ್ಳದೆ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದು ಇಳಕಲ್‌ನ ಚಿತ್ತರಗಿಯ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಶ್ರೀ ಗುರು ಮಹಾಂತ ಸ್ವಾಮೀಜಿ ಹೇಳಿದರು
.
ಡಾ.ಮಹಾಂತ ಶಿವಯೋಗಿ ಸ್ವಾಮೀಜಿ ಜನ್ಮದಿನಾಚರಣೆ ಅಂಗವಾಗಿ ನಗರದ ಹೆಬ್ಬಾಳು ರಿಂಗ್ ರಸ್ತೆಯ ಬಸವ ಮಾರ್ಗ ಫೌಂಡೇಷನ್‌ನ ವ್ಯಸನಮುಕ್ತ ಕೇಂದ್ರದಲ್ಲಿ ಶನಿವಾರ ಏರ್ಪಡಿಸಿದ್ದ ಉಚಿತ ಮದ್ಯವರ್ಜನ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುಡಿತದ ಚಟ ಇಡೀ ಕುಟುಂಬದ ನೆಮ್ಮದಿ, ಸಂತೋಷವನ್ನು ಕಿತ್ತುಕೊಳ್ಳುತ್ತದೆ. ಮಕ್ಕಳ ಭವಿಷ್ಯ ಹಾಳು ಮಾಡುತ್ತದೆ. ಹೆಣ್ಣು ಮಗಳನ್ನು ವಿಧವೆಯನ್ನಾಗಿಸುತ್ತದೆ. ನಂಬಿದವರನ್ನು ಅನಾಥರನ್ನಾಗಿ ಮಾಡುತ್ತದೆ. ಆದ್ದರಿಂದ ಕುಡಿತಕ್ಕೆ ಯಾರೂ ದಾಸರಾಗುವುದು ಬೇಡ ಎಂದು ತಿಳಿ ಹೇಳಿದರು.
ಡಾ. ವಿಜಯ ಮಹಾಂತ ಸ್ವಾಮೀಜಿ ಮಾತನಾಡಿ, ಎಲ್ಲ ಯೋಗಗಳ ಸಮನ್ವಯವೇ ಶಿವ ಯೋಗ. ಇದೇ ಬಸವ ಮಾರ್ಗ. ಅಂಬೇಡ್ಕರ್ ಭಾರತ ಸಂವಿಧಾನ ಬರೆದರೆ, ಅನುಭವ ಮಂಟಪದಲ್ಲಿ ಬಸವಾದಿ, ಶರಣರು ತಮ್ಮ ವಚನಗಳ ಮೂಲಕ ವಿಶ್ವ ಸಂವಿಧಾನ ಬರೆದರು ಎಂದರು.
ವಚನಗಳು ಆತ್ಮ ವಿದ್ಯೆ ಇದೆ: ವಚನಗಳಲ್ಲಿ ಆತ್ಮ ವಿದ್ಯೆ ಇದೆ. ಇದು ಕೇವಲ ನೌಕರಿ ಹಿಡಿಯಲು ಉಪಜೀವನದ ಲೌಕಿಕ ವಿದ್ಯೆಯಲ್ಲ. ಕಾಯಕ, ಅರಿವು, ಆರಾಧನೆ, ಸರಳ ಜೀವನ, ಮನುಷ್ಯತ್ವ, ಶಿಕ್ಷಣ, ಸಂಘಟನೆ, ಮೌಲ್ಯ ಆಗಿದೆ. ಇದೇ ವಚನ ಮಾರ್ಗ, ಶರಣ ಮಾರ್ಗ, ಬಸವ ಮಾರ್ಗ, ವಚನಗಳ ಆಶಯದ ಸನ್ಮಾರ್ಗ ಎಂದರು.
ಚಟ ಬಿಡುವುದು ಕಷ್ಟವಾಗಲಾರದು:
ಸಾಹಿತಿ ಬನ್ನೂರು ಕೆ.ರಾಜು ಮಾತನಾಡಿ, ಬಸವ ಎಂದರೆ ಬೆಳಕು. ಬೆಳಕೆಂದರೆ ಜ್ಞಾನ, ಪ್ರಜ್ಞೆ. ಇದು ಬಸವ ಮಾರ್ಗವಾಗಿದ್ದು, ಈ ಸನ್ಮಾರ್ಗದಲ್ಲಿ ನಡೆಯುವವರ ಮನಸ್ಸಿನಲ್ಲಿ ದೃಢಸಂಕಲ್ಪವಿದ್ದಲ್ಲಿ ಎಂತಹ ವ್ಯಸನಗಳಿಂದ ಬೇಕಾದರೂ ಮುಕ್ತರಾಗಬಹುದು. ಮನಸ್ಸು ಮಾಡಿದರೆ ದುಶ್ಚಟಗಳನ್ನು ಬಿಡುವುದೇನೂ ಕಷ್ಟವಾಗಲಾರದು ಎಂದರು.
ಶ್ರೀ ಮಹಾಂತ ಶಿವಯೋಗಿ ಸ್ವಾಮೀಜಿ ವ್ಯಸನ ಮುಕ್ತ ಸಮಾಜಕ್ಕಾಗಿ ತಮ್ಮ ಇಡೀ ಜೀವನವನ್ನು ಮೀಸಲಿಟ್ಟಿದ್ದರು. ‘ಮಹಾಂತ ಜೋಳಿಗೆ’ ಎಂಬ ಸಾರ್ಥಕ ಪರಿಕಲ್ಪನೆಯಲ್ಲಿ ಜೋಳಿಗೆ ಹಿಡಿದು ಎಲ್ಲೆಡೆ ನಡೆದಾಡುವ ಧನ್ವಂತರಿಯಾಗಿದ್ದು ವ್ಯಸನಮುಕ್ತ ಸಮಾಜಕ್ಕಾಗಿ ಕ್ರಾಂತಿಯನ್ನೇ ಮಾಡಿದರು ಎಂದರು.
ಜೋಳಿಗೆ ಹಿಡಿದು ಜನರ ಮುಂದೆ ಹೋಗಿ ನಿಮ್ಮಲ್ಲಿರುವ ವ್ಯಸನಗಳನ್ನು ನನ್ನ ಜೋಳಿಗೆಗೆ ಹಾಕಿ ಎಂದು ಹೇಳಿದ ಶ್ರೀಗಳು ಲಕ್ಷಾಂತರ ಜನರನ್ನು ಸುಧಾರಣೆ ಮಾಡಿದ್ದರೆಂದರು.
ಫೌಂಡೇಷನ್‌ನ ಸಂಸ್ಥಾಪಕ ಅಧ್ಯಕ್ಷ ಎಸ್. ಬಸವರಾಜು, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿ ಎಸ್. ಶಂಕರಪ್ಪ, ಪವಾಡ ಬಯಲು ತಜ್ಞ ಹುಲಿಕಲ್ ನಟರಾಜು ಇತರರಿದ್ದರು.