ಮೈಸೂರು: ದುಶ್ಚಟಗಳಿಂದುಂಟಾಗುವ ದುಷ್ಪರಿಣಾಮಗಳ ಅರಿವಿನ ಕೊರತೆಯಿಂದ ಯುವ ಜನಾಂಗ ಲಿಂಗ ಭೇದವಿಲ್ಲದೆ ವ್ಯಸನಗಳಿಗೆ ದಾಸರಾಗುತ್ತಿದ್ದಾರೆ ಎಂದು ಸುಯೋಗ್ ಆಸ್ಪತ್ರೆಯ ವೈದ್ಯ ಡಾ.ಬಿ.ಜಿ.ಪೊನ್ನಪ್ಪ ಕಳವಳ ವ್ಯಕ್ತಪಡಿಸಿದರು.
ದುಶ್ಚಟಗಳು ಹಾಗೂ ವ್ಯಸನಮುಕ್ತ ದಿನದ ಪ್ರಯುಕ್ತ ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧೂಮಪಾನ, ಮದ್ಯಪಾನ, ಮಾದಕ ವಸ್ತುಗಳ ಚಟ, ಅಶ್ಲೀಲ ಚಿತ್ರಗಳ ವೀಕ್ಷಣೆ, ಶೈಕ್ಷಣಿಕ ಅಭ್ಯಾಸದ ಕಡೆ ನಿರ್ಲಕ್ಷಿಸಿ ಅತಿ ಹೆಚ್ಚು ಮೊಬೈಲ್ ಬಳಕೆ, ದ್ವಿಚಕ್ರ ವಾಹನಗಳಲ್ಲಿ ರಸ್ತೆಯ ಮೇಲೆ ಅಪಾಯಕಾರಿಯಾಗಿ ವ್ಹೀಲಿಂಗ್ ಮತ್ತಿತರ ದುಶ್ಚಟಗಳಿಂದ ಯುವ ಸಮೂಹ ದಾರಿ ತಪ್ಪುತ್ತಿದೆ ಎಂದರು.
ಇಂತಹ ಚಟುವಟಿಕೆಯಿಂದ ಅಪರಾಧ ಸಂಖ್ಯೆ ಹೆಚ್ಚುತ್ತಿದೆ. ಯುವ ಸಮೂಹದಲ್ಲಿ ಸದೃಢ ವ್ಯಕ್ತಿತ್ವ ನಿರ್ಮಾಣ ಮಾಡಬೇಕಿದೆ. ಅದಕ್ಕಾಗಿ ಪಾಲಕರು, ಶಾಲಾ-ಕಾಲೇಜುಗಳಲ್ಲಿ ದುರ್ವ್ಯಸನಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಬೇಕು ಎಂದರು.
ಸಶಕ್ತ ರಾಷ್ಟ್ರ ನಿರ್ಮಾಣದಲ್ಲಿ ಯುವಶಕ್ತಿಯ ಪಾತ್ರ ಅಪಾರವಾದದ್ದು. ಸದೃಢ ರಾಷ್ಟ್ರ ನಿರ್ಮಾಣವಾಗಬೇಕಾದರೆ ಯುವಶಕ್ತಿಯು ಯಾವುದೇ ದುಶ್ಚಟಗಳಿಂದ ದೂರವಿದ್ದು ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯಯುತರಾಗಿರಬೇಕು ಎಂದರು.
ಪ್ರಾಂಶುಪಾಲ ಡಾ.ಪಿ.ದೀಪು, ನಿರ್ದೇಶಕ ಪ್ರೊ.ಕೆ.ಬಿ.ವಾಸುದೇವ, ಕಾರ್ಯಕ್ರಮದ ಸಂಯೋಜಕ ಡಾ.ಎನ್.ಜೆ.ಕುಮಾರ್ ಇನ್ನಿತರರಿದ್ದರು.