ಜಿಲ್ಲೆ

ವ್ಯಸನ ಮುಕ್ತ ಕೇಂದ್ರದಲ್ಲಿ ವ್ಯಕ್ತಿಯ ಹತ್ಯೆ: 6 ಮಂದಿ ಬಂಧನ

ಹಾಸನ: ಮದ್ಯವ್ಯಸನ ಮುಕ್ತ ಕೇಂದ್ರಕ್ಕೆ ದಾಖಲಾಗಿದ್ದ ಹಲ್ಲೆ ಮಾಡಿ ಕೊಲೆ ಮಾಡಿರುವ 7 ಆರೋಪಿಗಳಲ್ಲಿ 6ಜನರನ್ನ ಬಂಧಿಸಿದ್ದು, ಮತ್ತೊಬ್ಬ ತಲೆ ಮರೆಸಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು.

ನಗರದ ವಿಜಯನಗರ 2ನೇ ಹಂತದಲ್ಲಿರುವ ಪುನರ್ ಜೀವನ ಸೇವಾ ಸಂಸ್ಥೆ ಮದ್ಯವ್ಯಸನ ಮುಕ್ತ ಕೇಂದ್ರಕ್ಕೆ ಬೇಲೂರು ತಾಲ್ಲೂಕಿನ ಮೆದೂರು ಗ್ರಾಮ ತೋಪೇಗೌಡ ಎಂಬುವವರು ತಮ್ಮ ಮಗ ಪದ್ಮಗೌಡನ ಕುಡಿತದ ಚಟ ಬಿಡಸಲು ಆ.20ರಂದು 15 ಸಾವಿರರೂ. ನೀಡಿ ದಾಖಲಿಸಿದ್ದರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆ.24ರಂದು ಪದ್ಮಗೌಡ ಮೃತಪಟ್ಟಿದ್ದ. ಅಂತ್ಯಸಂಸ್ಕಾರ ನಡೆದಲು ಮೃತ ದೇಹಕ್ಕೆ ಸ್ನಾನ ಮಾಡಿಸುವ ವೇಳೆ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ. ಇದರಿಂದ ಅನುಮಾನಗೊಂಡು ದೂರು ದಾಖಲಿಸಿದ್ದರು. ವೈದ್ಯಕೀಯ ಮರಣೋತ್ತರ ಪರೀಕ್ಷೆ ನಡೆಸಿದಾಗ ಗಂಭೀರವಾಗಿ ಹಲ್ಲೆ ನಡೆಸಿದ್ದರಿಂದ ಮೃತಪಟ್ಟಿರುವುದು ಪತ್ತೆಯಾಗಿದೆ ಎಂದು ತಿಳಿಸಿದರು.

ಮದ್ಯ ಬಿಡಿಸಲು ಔಷಧ ನೀಡಿದಾಗ ಪದ್ಮಗೌಡ ವಿಚಿತ್ರವಾಗಿ ವರ್ತಿಸಿದ್ದಾನೆ. ಅವನನ್ನು ನಿಯಂತ್ರಿಸಲು ವ್ಯಸನ ಮುಕ್ತ ಕೇಂದ್ರ ಮಾಲೀಕ ಶಶಿಕುಮಾರ್, ಆತನ ಸಹಚರರು ಅಲ್ಲದೇ ಚಿಕಿತ್ಸೆ ಪಡೆಯಲು ಬಂದಿದ್ದ ನಾಲ್ವರ ಸಹಾಯ ಪಡೆದು ಕೈಕಾಲು ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಪದ್ಮಗೌಡ ಅಲ್ಲೇ ಮೃತಪಟ್ಟಿದ್ದು, ನಂತರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದರು

ಈ ಹಿನ್ನೆಲೆಯಲ್ಲಿ 7 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕಂಡು ಶಶಿಕುಮಾರ್, ವಿಜಯ್ ಕುಮಾರ್, ವೆಂಕಟೇಶ್, ಕ್ರಿಸ್ಟಫರ್, ಎಂ.ಕಿರಣ್ ಕುಮಾರ್, ರವಿ ಸೇರಿ ಏಳು ಜನರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ವಿನಯ್ ತಲೆ ಮರೆಸಿಕೊಂಡಿದ್ದಾನೆ ಎಂದು ತಿಳಿಸಿದರು.