ನೆಲಮಂಗಲ: ತಂಬಾಕು ಉತ್ಪನ್ನಗಳನ್ನು ತ್ಯಜಿಸಿದರೆ ಉತ್ತಮ ಆರೋಗ್ಯದ ಜತೆಗೆ ಸುಖಕರ ಜೀವನ ನಡೆಸಬಹುದು ಎಂದು ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ತೇಜಸ್ ಅಭಿಪ್ರಾಯಪಟ್ಟರು.
ನಗರದ ಅಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳವಾರ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ತಂಬಾಕು ಉತ್ಪನ್ನಗಳ ಬಳಕೆಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ತಂಬಾಕು ಪದಾರ್ಥಗಳ ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲಾಗುವ ಕೆಟ್ಟ ಪರಿಣಾಮಗಳ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಮೇ 31ರಂದು ವಿಶೇಷ ದಿನವನ್ನು ಆಚರಿಸಲಾಗುತ್ತಿದೆ. ವ್ಯಸನ ವೈಯಕ್ತಿಕ ನಷ್ಟದ ಜತೆಗೆ ಇಡೀ ಕುಟುಂಬವನ್ನು ಕಷ್ಟಕ್ಕೆ ಸಿಲುಕಿಸಲಿದೆ. ಆದ್ದರಿಂದ ವ್ಯಸನ ತ್ಯಜಿಸಬೇಕು ಎಂದರು.
ತಹಸೀಲ್ದಾರ್ ಮಂಜುನಾಥ್ ಮಾತನಾಡಿ, ಮನಸ್ಸು ಮಾಡಿದರೆ ಸ್ವಯಂ ಪ್ರೇರಿತರಾಗಿ ತಂಬಾಕು ಸೇವನೆ ತ್ಯಜಿಸಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ವ್ಯಸನ ವರ್ಜನೆ ಕೇಂದ್ರಗಳಿಂದ ಸಹಾಯ ಪಡೆಯಬಹುದು ಎಂದು ಸಲಹೆ ನೀಡಿದರು.
ತಂಬಾಕು ನಿಯಂತ್ರಣ ಘಟಕ ಜಿಲ್ಲಾ ಸಲಹೆಗಾರ್ತಿ ಡಾ. ವಿದ್ಯಾರಾಣಿ, ತಾಲೂಕು ಆರೋಗ್ಯಾಧಿಕಾರಿ ಡಾ. ಹರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ. ರಮೇಶ್, ಆರೋಗ್ಯ ನಿರೀಕ್ಷಕ ನಾಗೇಶ್ ಇದ್ದರು.