ವಿಜಯವಾಣಿ ಸುದ್ದಿಜಾಲ ಧಾರವಾಡ
ಕನ್ನಡ ನಮ್ಮ ಮಾತೃಭಾಷೆ ಇರಬಹುದು. ಆದರೆ ಜಗತ್ತಿನಾದ್ಯಂತ ವ್ಯವಹರಿಸಲು ಆಂಗ್ಲ ಭಾಷೆ ಮುಖ್ಯ ಸಾಧನ ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ವಿದ್ಯಾಗಿರಿ ಜೆಎಸ್‌ಎಸ್‌ನ ಶ್ರೀ ಮಂಜುನಾಥೇಶ್ವರ ಪಿಯು ಕಾಲೇಜು ಮತ್ತು ಜಿಲ್ಲಾ ಆಂಗ್ಲ ಭಾಷಾ ಉಪನ್ಯಾಸಕರ ವೇದಿಕೆ ಸಹಯೋಗದಲ್ಲಿ ಜೆಎಸ್‌ಎಸ್‌ನ ಉತ್ಸವ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪಿಯು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಪಠ್ಯಕ್ರಮಗಳು ಸಹ ಆಂಗ್ಲ ಮಾಧ್ಯಮದಲ್ಲಿ ಇರುವುದರಿಂದ ಆಂಗ್ಲ ಭಾಷೆ ಪ್ರಾಮುಖ್ಯತೆ ವಹಿಸುತ್ತದೆ. ಅದರಂತೆ ವಿದ್ಯಾರ್ಥಿಗಳು ಆಂಗ್ಲ ಭಾಷೆ ಸಂಪೂರ್ಣ ಜ್ಞಾನ ಪಡೆಯಬೇಕು ಎಂದರು.
ಡಾ. ತೇಜಶ್ವಿನಿ ನಾರಾಯಣಕರ ಮಾತನಾಡಿ, ಶೈಕ್ಷಣಿಕ ಚಟುವಟಿಕೆಗಳಿಗೆ ತಮ್ಮ ಸಹಕಾರ ಹಾಗೂ ಬೆಂಬಲ ಸದಾ ಇರುತ್ತದೆ ಎಂದರು. ಪಿ.ಕೆ. ಯಾವಗಲ್ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಗುರುನಾಥ ಬಡಿಗೇರ, ನೇಲ್ ಪ್ರತಾಪನ್, ಡಾ. ಸ್ಟೆಲ್ಲಾ ಸ್ಟೀವನ್, ಎಲ್.ಟಿ. ಅಸ್ಲಂ ಕೊಂಕಣಿ ಭಾಗವಹಿಸಿದ್ದರು. ಡಾ. ವೈ.ಎಸ್. ರಾಯಬಾಗಿ ಅಧ್ಯಕ್ಷತೆ ವಹಿಸಿದ್ದರು.
ಗುಲಶನ್ ಸುಳ್ಳದ ಸ್ವಾಗತಿಸಿದರು. ಉಮೇಶ ಮುನವಳ್ಳಿ ವಂದಿಸಿದರು.