ಜಿಲ್ಲೆ

ವ್ಯವಸ್ಥಿತವಾಗಿ ಮತದಾನ ಪ್ರಕ್ರಿಯೆ ನಡೆಸಿ

ಬಳ್ಳಾರಿ : ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೂಕ್ತ ತರಬೇತಿ ಪಡೆದು, ಯಾವುದೇ ಗೊಂದಲಕ್ಕೀಡಾಗದೆ ವ್ಯವಸ್ಥಿತವಾಗಿ ಮತದಾನ ಪ್ರಕ್ರಿಯೆ ನಡೆಸುವಂತೆ ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಸೂಚಿಸಿದರು.
ನಗರದ ವಿವಿಧಡೆ ಮತಗಟ್ಟೆ ನೇಮಕಗೊಂಡ ಅಧಿಕಾರಿಗಳಿಗೆ ಬುಧವಾರ ನಡೆದ ಎರಡನೇ ಹಂತದ ತರಬೇತಿಗಳಿಗೆ ಭೇಟಿ ನೀಡಿ ಮಾತನಾಡಿದರು. ಮತದಾನ ಪ್ರಕ್ರಿಯೆಯನ್ನು ಸುಗಮವಾಗಿ ಹಾಗೂ ಅಚ್ಚುಕಟ್ಟಾಗಿ ನಡೆಸುವಲ್ಲಿ ಮತಗಟ್ಟೆ ಕರ್ತವ್ಯಕ್ಕೆ ನಿಯೋಜಿತರಾದ ಅಧಿಕಾರಿ, ಸಿಬ್ಬಂದಿಗಳ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಯಾವುದೇ ಗೊಂದಲಗಳಿಗೆ ಅವಕಾಶ ಮಾಡಿಕೊಡದೆ, ವ್ಯವಸ್ಥಿತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.
ಎಸಿ ಹೇಮಂತ್ ಕುಮಾರ ಮಾತನಾಡಿ, ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸಲು ಎಲ್ಲ ಅಧಿಕಾರಿ, ಸಿಬ್ಬಂದಿಗಳು ಬದ್ಧರಾಗಿರಬೇಕು. ಮೇ. 06 ರಂದೇ ಮಸ್ಟರಿಂಗ್ ಕಾರ್ಯ ನಡೆಯಲಿದ್ದು, ಇದಕ್ಕೆ ಆಗಮಿಸುವ ಅಧಿಕಾರಿ, ಸಿಬ್ಬಂದಿಗಳಿಗೆ ಸಾರಿಗೆ, ಊಟೋಪಹಾರ ಸೇರಿದಂತೆ ಸಕಲ ವ್ಯವಸ್ಥೆ ಮಾಡಿಕೊಡಲಾಗುವುದು. ಮತದಾನ ಪ್ರಕ್ರಿಯೆ ಪ್ರಾರಂಭಕ್ಕೂ ಮುನ್ನ ನಿರ್ವಹಿಸಬೇಕಾದ ಕಾರ್ಯಗಳು, ಮತದಾನದ ದಿನ ಅಣಕು ಮತದಾನ, ನಂತರ ಮತದಾನ ಪ್ರಕ್ರಿಯೆ ನಡೆಸುವ ರೀತಿ ಹಾಗೂ ಮತದಾನವನ್ನು ಪೂರ್ಣಗೊಳಿಸಿ, ಡಿಮಸ್ಟರಿಂಗ್ ನಲ್ಲಿ ಇವಿಎಂ ಸಹಿತ ಇತರೆ ದಾಖಲೆಗಳನ್ನು ಹಸ್ತಾಂತರಿಸುವ ಬಗ್ಗೆ ಕೂಲಂಕುಷವಾಗಿ ತರಬೇತಿ ಹಾಗೂ ಮಾಹಿತಿ ನೀಡಲಾಗುವುದು. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಗಳು, ಎಲ್ಲಾ ಹಂತದ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.
ಕಂಪ್ಲಿ ವಿಧಾನಸಭಾ ಕ್ಷೇತ್ರದ ತರಬೇತಿ ಸೇಂಟ್ ಫಿಲೋಮಿನಾ ಸಂಯುಕ್ತ ಜೂನಿಯರ್ ಕಾಲೇಜು, ಬಳ್ಳಾರಿ ಗ್ರಾಮೀಣ ಕ್ಷೇತ್ರದ ತರಬೇತಿ ಎಸ್.ಕೆ. ಮೋದಿ ಸ್ಕೂಲ್, ಬಳ್ಳಾರಿ ನಗರ ಕ್ಷೇತ್ರದ ತರಬೇತಿ ಸೇಂಟ್ ಜಾನ್ಸ್ ಪಿ.ಯು. ಕಾಲೇಜಿನಲ್ಲಿ ನಡೆಯಿತು.