ಬಾಗಲಕೋಟೆ: ಶ್ರದ್ಧೆ ಹಾಗೂ ನಿಷ್ಠೆಯಿಂದ ಮಾಡುವ ಕಾರ್ಯ ಮನಸ್ಸಿಗೆ ನೆಮ್ಮದಿ ತರುತ್ತದೆ. ವಿದ್ಯಾರ್ಥಿಗಳು ಇಂತಹ ಮನೋಭಾವವನ್ನು ಬೆಳೆಸಿಕೊಂಡಾಗ ಶಿಬಿರಗಳು ಯಶಸ್ವಿಯಾಗಬಲ್ಲವು ಎಂದು ಕಾಲೇಜು ಉಪವಿಭಾಗದ ಅಧ್ಯಕ್ಷ ಡಾ.ಪಿ.ಆರ್.ಜೋಶಿ ಹೇಳಿದರು.
ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್. ಆರ್. ನರಸಾಪುರ ಕಲಾ ಮತ್ತು ಎಂ.ಬಿ.ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಎರಡೂ ಎನ್.ಎಸ್.ಎಸ್. ಘಟಕಗಳ ವತಿಯಿಂದ ದತ್ತು ಗ್ರಾಮ ಸೀಮಿಕೇರಿ ಲಡ್ಡು ಮುತ್ಯಾ ದೇವಸ್ಥಾನ ಆವರಣದಲ್ಲಿ ಭಾನುವಾರ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆಯ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಮಾತನಾಡಿದರು.
ಶಿಬಿರದಲ್ಲಿ ಕಂಡುಕೊಂಡ ಶಿಸ್ತು,ಪರಸ್ಪರ ತಿಳುವಳಿಕೆ,ಹೊಂದಾಣಿಕೆ ಹಾಗೂ ಸೇವಾ ಮನೋಭಾವದಂಥಹ ಗುಣಗಳನ್ನು ಮುಂದಿನ ದಿನಗಳಲ್ಲೂ ಮುಂದುವರೆಸಿಕೊಂಡು ಹೋಗಬೇಕು. ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಮತ್ತು ವ್ಯಕ್ತಿತ್ವದ ವಿಕಾಸಕ್ಕೆ ಈ ಶಿಬಿರಗಳು ಸಹಕಾರಿಯಾಗಿವೆ ಎಂದರು.
ಜೀವನದಲ್ಲಿ ನಡೆ-ನುಡಿಯ ಮಹತ್ವವನ್ನು ಅರಿತು ವಿದ್ಯಾರ್ಥಿಗಳು ಅದನ್ನು ಮೈಗೂಡಿಸಿಕೊಳ್ಳಬೇಕು. ಕಾಲೇಜುಗಳಲ್ಲಿ ನಡೆಯುವ ದೈನಂದಿನ ಸೇವಾ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಶ್ರೀನಿವಾಸ ನರಗುಂದ ಮಾತನಾಡಿ, ವ್ಯಕ್ತಿಯ ಅಂತಿಮ ಗುರಿ ವ್ಯಕ್ತಿತ್ವದ ವಿಕಾಸ. ಅದನ್ನು ಎನ್‌ಎಸ್‌ಎಸ್ ಶಿಬಿರಗಳಲ್ಲಿ ಭಾಗವಹಿಸುವದರ ಮೂಲಕ ಸಾಕಾರಗೊಳಿಸಬಹುದು.
ಶಿಬಿರದಲ್ಲಿನ ಹಲವು ಕಲಿಕಾ ಅನುಭವಗಳು ಭವಿಷ್ಯತ್ತಿನ ಬದುಕಿಗೆ ನೆರವಾಗಬಲ್ಲವು. ವ್ಯಕ್ತಿಯ ವರ್ತನೆಯ ಪರಿವರ್ತನೆ ಶಿಕ್ಷಣದಿಂದ ಸಾಧ್ಯ ಎಂಬ ಅಂಶವನ್ನು ವಿದ್ಯಾರ್ಥಿಗಳು ಅರಿಯಬೇಕು ಎಂದರು.
ತರಬೇತಿ ಕೇಂದ್ರದಂತಿರುವ ಇಂತಹ ಶಿಬಿರಗಳ ಪ್ರಯೋಜನವನ್ನು ಪಡೆದು ಉಳಿದ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ಶಿಬಿರದಲ್ಲಿ ಅನುಭವಕ್ಕೆ ಬಂದ ಹೊಸ ವಿಚಾರ ಮತ್ತು ಕೌಶಲಗಳು ಸಾಂದರ್ಭಿಕವಾಗಿ ವ್ಯಕ್ತವಾದಾಗ ಇಂತಹ ಶಿಬಿರಗಳು ಸಾರ್ಥಕವಾಗಬಲ್ಲವು ಎಂದು ತಿಳಿಸಿದರು.
ಶಿಬಿರಾರ್ಥಿಗಳಾದ ಸುಷ್ಮಾ ದೇಸಾಯಿ, ಶ್ರುತಿ ನಾಯಕ, ಪ್ರವೀಣ ಮೇಟಿ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮಾಧಿಕಾರಿಗಳಾದ ನಾಗರಾಜ ಹಸಬಿ, ಎಚ್.ಜಿ ಗೌಡರ, ಶಿಬಿರದ ವಿದ್ಯಾರ್ಥಿ ನಾಯಕ ಪೀರಸಾಬ್ ತಿಮ್ಮಸಾಗರ, ಸಂಗಯ್ಯ ಸಾರಂಗಮಠ, ಉಪನ್ಯಾಸಕ ಎಸ್.ಎಂ.ಹಡಪದ, ಪರಶುರಾಮ ವಡ್ಡರ ಇದ್ದರು. ಶ್ರೇಯಾ ಮುತ್ತತ್ತಿ ಪ್ರಾರ್ಥಿಸಿದರು. ಪ್ರಕಾಶ ಲಮಾಣಿ ತಂಡ ಎನ್‌ಎಸ್‌ಎಸ್ ಗೀತೆ ಹಾಡಿದರು. ಮೀನಾಕ್ಷಿ ಮನಗೂಳಿ ವಂದಿಸಿದರು. ಆಸ್ಮಾ ಕಂದಗಲ್ ನಿರೂಪಿಸಿದರು.