ಬಾಗಲಕೋಟೆ: ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವಾಗಲು ಶೈಕ್ಷಣಿಕ ವಾತಾವರಣ ಬಹಳ ಪ್ರಮುಖವಾಗಿದ್ದು ಪ್ರತಿನಿತ್ಯ ತರಗತಿಗಳಿಗೆ ಕಡ್ಡಾಯವಾಗಿ ಹಾಜರಾಗುವುದರ ಮುಖಾಂತರ ಒಳ್ಳೆಯ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕು ಎಂದು ಪ್ರಾಚಾರ್ಯ ಜಗನ್ನಾಥ ವ್ಹಿ. ಚವ್ಹಾಣ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ೨೦೨೫- ೨೬ ನೆ ಸಾಲಿನ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಪ್ರತಿಭೆ, ಸಾಮರ್ಥ್ಯ ಗುರುತಿಸಿಕೊಳ್ಳುವುದೇ ಶಿಕ್ಷಣದ ಮೂಲ ಉದ್ದೇಶ. ಎಲ್ಲರೂ ಒಂದೇ ರೀತಿ ಇರಲು ಸಾಧ್ಯವಿಲ್ಲ. ಪ್ರತಿಯೊಬ್ಬರಲ್ಲೂ ಯಾವುದಾದರೊಂದು ಸುಪ್ತ ಪ್ರತಿಭೆಯು ಅಡಗಿರುತ್ತದೆ. ಅವುಗಳನ್ನು ಬೆಳೆಸಿ ಪೋಷಿಸಲು ಕಾಲೇಜಿನಲ್ಲಿ ಹಲವಾರು ಅವಕಾಶಗಳಿವೆ. ವಿದ್ಯಾರ್ಥಿಗಳೆಲ್ಲರೂ ಅವುಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಯಶಸ್ವಿಗಾಗಿ, ಬಿಳ್ಳೂರು ಅಜ್ಜನವರ ಪ್ರತಿಮೆಗೆ ಪೂಜೆಯನ್ನು ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲಾ ಬೋಧಕ ಹಾಗೂ ಬೋಧಕೇತ ಸಿಬ್ಬಂದಿಯವರು ಉಪಸ್ಥಿತರಿದ್ದರು.