ಜಿಲ್ಲೆ

ವ್ಯಕ್ತಿ ಅಪಹರಣ:ಕೆಲವೇ ಗಂಟೆಗಳಲ್ಲಿ ಆರೋಪಿಗಳ ಬಂಧನ

ಹಾಸನ: ಖಾಸಗಿ ಕಂಪನಿ ಉದ್ಯೋಗಿಯನ್ನು ಅಪಹರಿಸಿಕೊಂಡು ಹೋಗುತ್ತಿದ್ದ ಅಪಹರಣಕಾರರನ್ನು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಶಾಂತಿಗ್ರಾಮ ಪೊಲೀಸರು ಯಶಸ್ವಿಯಾಗಿದ್ದಾರೆ.
ಸುಗುರೇಶ್, ಅಶೋಕ್, ಶಾಂಬಾನ್, ದೇವರಾಜ್, ವೀರೇಶ್, ರಾಜು, ರಾಘು ನಾಯಕ್ ಬಂಧಿತ ಆರೋಪಿಗಳು.
ನಗರದ ಚನ್ನಪಟ್ಟಣ ನಿವಾಸಿ ವೇಣು(44) ಎಂಬುವರು ಬೆಂಗಳೂರಿನಲ್ಲಿ ಮಾರ್ಕೆಟಿಂಗ್ ವ್ಯವಹಾರ ಮಾಡುತ್ತಿದ್ದರು. ಕಳೆದ 6 ತಿಂಗಳ ಹಿಂದೆ ವೇಣು ಮೈಸೂರಿಗೆ ವರ್ಗಾವಣೆಯಾಗಿದ್ದರು. ಜ.6ರಂದು ವೇಣು ಕಾರು ಚಾಲಕನೊಂದಿಗೆ ಹಾಸನದ ತಮ್ಮ ನಿವಾಸಕ್ಕೆ ಬಂದಿದ್ದರು. ಜ.8ರ ಸೋಮವಾರ ಬೆಳಿಗ್ಗೆ 10 ಗಂಟೆ ಸಮಯದಲ್ಲಿ ನೆಲಮಂಗಲಕ್ಕೆ ಹೋಗುವುದಾಗಿ ಪತ್ನಿಗೆ ಹೇಳಿ ಕಾರಿನಲ್ಲಿ ತೆರಳಿದ್ದರು. ಅದೇ ದಿನ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ವೇಣು ಅವರ ಸ್ನೇಹಿತ ದೇವ ಎಂಬುವರು ವೇಣು ಪತ್ನಿಗೆ ಫೋನ್ ಮಾಡಿ, ಏಳೆಂಟು ಜನರ ಗುಂಪು ವೇಣು ಚಲಿಸುತ್ತಿದ್ದ ಕಾರನ್ನು ತಡೆದು ಗ್ಲಾಸ್ ಒಡೆದು ವೇಣು ಅವರನ್ನು ಎಳೆದುಕೊಂಡು ಅವರ ಕಾರಿನಲ್ಲಿ ಕೂರಿಸಿಕೊಂಡು ಅಪಹರಿಸಿಕೊಂಡು ಹೋಗುತ್ತಿದ್ದಾರೆಂದು ತಿಳಿಸಿದ್ದಾರೆ.
ತಕ್ಷಣವೇ ವೇಣು ಪತ್ನಿ ಪ್ರಿಯಾಂಕಾ ಅವರು ಶಾಂತಿಗ್ರಾಮ ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕೆಲವೇ ಗಂಟೆಗಳಲ್ಲಿ ಅಪಹರಣಕಾರರನ್ನು ಬಂಧಿಸಿದ್ದು, ಯಾವ ಕಾರಣಕ್ಕೆ ಕಿಡ್ನ್ಯಾಪ್ ಮಾಡಲಾಗಿದೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.