ಜಿಲ್ಲೆ

ವ್ಯಂಗ್ಯಚಿತ್ರಕಾರ ಅಜಿತ್ ನಿನನ್ ನಿಧನ

ಮೈಸೂರು: ನಗರದ ನಿವಾಸಿ, ವ್ಯಂಗ್ಯಚಿತ್ರಕಾರ ಅಜಿತ್ ನಿನನ್ (68) ಶುಕ್ರವಾರ ಹೃದಯಾಘಾತದಿಂದ ನಿಧನರಾದರು.
ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ.


ಹೈದ್ರಾಬಾದ್‌ನಲ್ಲಿ ಜನಿಸಿದ ಅವರು, ಚೆನ್ನೈನಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಎಂ.ಎ ಪದವಿ ಪಡೆದ ನಂತರ ವ್ಯಂಗ್ಯಚಿತ್ರಕಾರರಾದರು. ಇಂಡಿಯಾ ಟುಡೆ, ಔಟ್‌ಲುಕ್, ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗಳಿಗೆ ವ್ಯಂಗ್ಯಚಿತ್ರಕಾರರಾಗಿ ಕೆಲಸ ಮಾಡಿದ್ದರು. ಇಂಡಿಯಾ ಟುಡೆ ಪತ್ರಿಕೆ ಬಳಗದ ‘ಟಾರ್ಗೆಟ್’ ಎಂಬ ಮಕ್ಕಳ ಪತ್ರಿಕೆಗೆ ’ಡಿಟೆಕ್ಟಿವ್ ಮೂಚುವಾಲಾ’ ಎಂಬ ಸರಣಿ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದ್ದರು. ಬಳಿಕ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ನಿತ್ಯ ವ್ಯಂಗ್ಯಚಿತ್ರ ಬರೆಯುತ್ತಿದ್ದರು.


ದೆಹಲಿಯಲ್ಲಿದ್ದ ಅವರು, ಎರಡು ವರ್ಷಗಳ ಹಿಂದೆ ಮೈಸೂರಿನ ಕೆಆರ್‌ಎಸ್ ರಸ್ತೆಯ ಬ್ರಿಗೇಡ್ ಸಿಂಫೋನಿ ಅಪಾರ್ಟ್‌ಮೆಂಟ್‌ನ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. ಅವರ ಅಂತ್ಯಕ್ರಿಯೆ ನಗರದ ಚಾಮುಂಡಿಬೆಟ್ಟದ ತಪ್ಪಲಿನ ಚಿತಾಗಾರದಲ್ಲಿ ಸೆ.10ರಂದು ಮಧ್ಯಾಹ್ನ 1ಕ್ಕೆ ನೆರವೇರಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.