ಆನಂದಪುರ ಸಮೀಪದ ದಾಸಕೊಪ್ಪದ ಕಲಾವಿದ ಶ್ರೀನಿವಾಸ ತನ್ನ ಕುಟುಂಬದವರ ಜತೆಗೂಡಿ ಗಣೇಶಮೂರ್ತಿ ತಯಾರಿಕೆಯಲ್ಲಿ ತೊಡಗಿರುವುದು. 
ಜಿಲ್ಲೆ

ವೈವಿಧ್ಯಮಯ ಗಣೇಶ ಮೂರ್ತಿಗಳ ತಯಾರಿಕೆ

ಆನಂದಪುರ: ದಾಸಕೊಪ್ಪದ ಶ್ರೀನಿವಾಸ ಎಂಬ ಕಲಾವಿದನ ಕೈಚಳಕದಲ್ಲಿ ನೂರಾರು ಬಗೆಯ ಗಣೇಶ ವಿಗ್ರಹಗಳು ಸಿದ್ಧಗೊಂಡಿವೆ. ಕಳೆದ ಜೂನ್ ತಿಂಗಳಿನಲ್ಲಿ ಮೂರ್ತಿ ತಯಾರಿಕೆ ಆರಂಭಿಸಿದ ಕಲಾವಿದ ಕುಂಸಿ ಸಮೀಪದ ಹಾರ‌್ನಳ್ಳಿಯಿಂದ ವಿಶೇಷ ಮಣ್ಣನ್ನು ತರಿಸಿ ಹದಗೊಳಿಸಿ ವಿಗ್ರಹ ನಿರ್ಮಾಣ ಕಾರ್ಯ ಆರಂಭಿಸಿದ್ದರು.

ಗೌರಿ-ಗಣೇಶ ಹಬ್ಬಕ್ಕಾಗಿ ಮೂರ್ತಿಗಳ ತಯಾರಿಕೆ ಬಹುತೇಕ ಪೂರ್ಣಗೊಂಡಿದೆ. ವಿವಿಧ ವಿನ್ಯಾಸದ 125ಕ್ಕೂ ಅಕ ಗಣಪತಿ ಮೂರ್ತಿಗಳು ಹಾಗೂ 20ಕ್ಕೂ ಅಕ ಗೌರಿ ವಿಗ್ರಹ ತಯಾರಿಸಿದ್ದಾರೆ. ಕಳೆದ 30 ವರ್ಷಗಳಿಂದ ಮಣ್ಣಿನ ವಿಗ್ರಹ ತಯಾರಿಸುತ್ತಿರುವ ಇವರು ವರ್ಷದಿಂದ ವರ್ಷಕ್ಕೆ ಹೊಸ ಹೊಸ ಶೈಲಿಯ ವಿಗ್ರಹ ತಯಾರಿಸುತ್ತಿದ್ದಾರೆ.

ಸುತ್ತಮುತ್ತಲಿನ ಹಲವು ಗ್ರಾಮಗಳು, ಯುವಕ ಸಂಘಗಳ ಗಣೇಶೋತ್ಸವಕ್ಕೆ ಇವರು ತಯಾರಿಸಿದ ವಿಗ್ರಹಗಳಿಗೆ ಬಹು ಬೇಡಿಕೆ ಇದೆ. ಗ್ರಾಹಕರ ಬೇಡಿಕೆಯ ಸಂಖ್ಯೆಗೆ ಅನುಸಾರವಾಗಿ ವಿಗ್ರಹ ನಿರ್ಮಿಸುತ್ತಾರೆ. ಈ ವರ್ಷದ ಆಕರ್ಷಣೆಯಾಗಿ ನವಿಲು, ಹಸು, ಹಂಸಪಕ್ಷಿ, ಆನೆ, ಸಿಂಹ, ಹುಲಿ, ಕಮಲದ ಹೂವು, ಹಣ್ಣು- ಕಾಯಿ, ನಾಗರಹಾವು, ಶಂಖ, ಚಕ್ರ ಇತ್ಯಾದಿ ಸಹಿತ ಗಣೇಶ ವಿಗ್ರಹಗಳು ಮನಸೂರೆಗೊಳ್ಳುವಂತಿವೆ. ಝರಿ ಪೇಟ ಧರಿಸಿದ ಗಣಪ, ಕೊಳಲು, ಡಮರು, ಚಂಡೆ ಇತ್ಯಾದಿ ವಾದ್ಯ ಸಹಿತ ಗಣಪ ಆಕರ್ಷಕವಾಗಿ ಮೂಡಿಬಂದಿವೆ. ಸುಮಾರು 20ಕ್ಕೂ ಅಕ ಗೌರಿ ವಿಗ್ರಹಗಳನ್ನೂ ತಯಾರಿಸಿದ್ದಾರೆ. ಅರ್ಧ ಅಡಿಯಿಂದ ಐದು ಅಡಿ ಎತ್ತರದವರೆಗಿನ ವಿಗ್ರಹಗಳನ್ನು ಇವರು ಸಿದ್ಧಪಡಿಸಿದ್ದಾರೆ.

ಸಿದ್ದೇಶ್ವರ ಕಾಲನಿಯಲ್ಲಿ ಶೆಡ್ ನಿರ್ಮಿಸಿ ವಿಗ್ರಹ ತಯಾರಿಸಿರುವ ಕೆಲಸಕ್ಕೆ ಇವರ ಪತ್ನಿ, ಮಕ್ಕಳು ಸಾಥ್ ನೀಡುವ ಮೂಲಕ ಅವರು ಸಹ ಕಲಿಕೆಯಲ್ಲಿ ತೊಡಗಿದ್ದಾರೆ.

ದಾಸಕೊಪ್ಪದ ಕಲಾವಿದ ಶ್ರೀನಿವಾಸ್ ರಚಿಸಿರುವ ಗಣಪತಿ ವಿಗ್ರಹಗಳು ಮನೋಜ್ಞವಾಗಿವೆ. ವಿಗ್ರಹದ ಮಂದಹಾಸ, ಪ್ರಸನ್ನತೆ ಗಮನಾರ್ಹ. ಕಳೆದ ಹಲವು ವರ್ಷಗಳಿಂದ ಅತ್ಯಂತ ಭಕ್ತಿಯಿಂದ ದೇವರ ಸೇವೆ ಎಂಬಂತೆ ಈ ಕಾರ್ಯ ನಡೆಸುತ್ತಿರುವುದು ಹೆಮ್ಮೆ ಮೂಡಿಸುತ್ತದೆ.

ಪ್ರಶಾಂತ ಭಟ್, ಅರ್ಚಕ, ಕಣ್ಣೂರು

ಪ್ರತಿ ವರ್ಷ ಹಬ್ಬಕ್ಕಿಂತ ಮೊದಲ ಐದು ತಿಂಗಳ ಮೊದಲೇ ವಿಗ್ರಹ ತಯಾರಿಕೆಗೆ ಸಿದ್ಧತೆ ನಡೆಸಲು ಆರಂಭಿಸುತ್ತೇನೆ. ಭಕ್ತರ ಬೇಡಿಕೆ ಅನುಸಾರ ನಾನೂ ಸಹ ದೇವರ ಸೇವೆ ಎಂಬ ಭಾವನೆಯಿಂದ ಈ ಕಾರ್ಯ ನಡೆಸುತ್ತಿದ್ದೇನೆ. ಯುವಪೀಳಿಗೆಗೆ ತರಬೇತಿ ನೀಡಿ ಈ ಕಲೆಯನ್ನು ಬೆಳೆಸುತ್ತಿದ್ದೇನೆ.

ಶ್ರೀನಿವಾಸ, ಮೂರ್ತಿ ತಯಾರಿಕೆ ಕಲಾವಿದ