ಮೈಸೂರು: ಸೃಜನಶೀಲ ಸಾಹಿತ್ಯ, ಕಾದಂಬರಿ, ನಾಟಕ ಸೇರಿದಂತೆ ವೈವಿಧ್ಯಮಯ ಕೃತಿಗಳನ್ನು ಪ್ರಕಟಿಸುವವರ ಸಂಖ್ಯೆ ತುಂಬಾ ಕಡಿಮೆಯಾಗಿದೆ ಎಂದು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಕುಲಪತಿ ಪ್ರೊ.ನಾಗೇಶ್ ವಿ. ಬೆಟ್ಟಕೋಟೆ ವಿಷಾದ ವ್ಯಕ್ತಪಡಿಸಿದರು.
ಸಂಸ್ಕೃತಿ ಪ್ರಕಾಶನದಿಂದ ನಗರದ ಗೋಪಾಲಸ್ವಾಮಿ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ನಿವೃತ್ತ ತಹಸೀಲ್ದಾರ್ ಡಾ.ವಿ.ರಂಗನಾಥ್ ಅವರ ದಸರಾ- ಕಿರು ಕೈಪಿಡಿ, ಜೀವನಪ್ರೀತಿ, ವೈಶಾಲ್ಯವೇ ಜೀವನ-ಸಂಕುಚಿತತೆಯೇ ಮರಣ- ವ್ಯಕ್ತಿತ್ವ ವಿಕಸನ ಲೇಖನಗಳು, ರಸಿಕ ಪುತ್ತಿಗೆಯವರ ಪಿತ್ರಾರ್ಜಿತ ಕಾದಂಬರಿ ಹಾಗೂ ಬೇಡಾದ ಬಾಳು- ಕಥಾ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪ್ರಕಾಶಕರು ಹಣ ಮಾಡುವ ಉದ್ದೇಶದಿಂದ ಪುಸ್ತಕವನ್ನು ಪ್ರಕಟಿಸುತ್ತಿದ್ದಾರೆ. ಸಾಹಿತ್ಯದ ಬಗ್ಗೆ ಗೊತ್ತಿಲ್ಲದವರು ಸಹ ಪ್ರಕಾಶನದ ಮೂಲಕ ಹಣ ಮಾಡಲು ಮುಂದಾಗಿದ್ದಾರೆ. ಆದರೆ ಸೃಜನಶೀಲ ಸಾಹಿತ್ಯ, ಕಾದಂಬರಿ, ನಾಟಕ ಸೇರಿದಂತೆ ವೈವಿಧ್ಯಮಯ ಕೃತಿಗಳನ್ನು ಪ್ರಕಟಿಸುವವರು ತುಂಬಾ ಕಡಿಮೆ. ಜತೆಗೆ ಪುಸ್ತಕವನ್ನು ಕೊಂಡು ಓದುವವರ ಸಂಖ್ಯೆ ಸಹ ಕಡಿಮೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೃತಿಗಳನ್ನು ಕುರಿತು ವೈದ್ಯರಾದ ಡಾ.ಎ.ಎಸ್. ಚಂದ್ರಶೇಖರ್ ಮಾತನಾಡಿ, ಡಾ.ವಿ. ರಂಗನಾಥ್ ಅವರ 5 ಕೃತಿಗಳು ಉತ್ತಮ ಮೌಲ್ಯಗಳನ್ನು ಹೊಂದಿವೆ. ಈ ಪುಸ್ತಕಗಳನ್ನು ಜನ ಖರೀದಿಸಿ ಓದಬೇಕು. ಜತೆಗೆ ಮಕ್ಕಳಿಗೂ ಪುಸ್ತಕಗಳನ್ನು ಓದಿಸುವ ಹವ್ಯಾಸ ಬೆಳೆಸಬೇಕು. ಸಂಸ್ಕೃತಿ ಪ್ರಕಾಶನ ಹೆಸರಿಗೆ ತಕ್ಕಂತೆ ಮೌಲ್ಯಯುತ ಪುಸ್ತಕ ಪ್ರಕಟಿಸುವ ಮೂಲಕ ಸಂಸ್ಕೃತಿ ಬೆಳವಣಿಗೆ ಸಹಕಾರಿಯಾಗಿದೆ ಎಂದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಕಾರ್ಯಕಾರಿ ಸದಸ್ಯ ಮ. ವೆಂಕಟರಾಮು ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ, ಲೇಖಕ ಡಾ.ವಿ. ರಂಗನಾಥ್ ಇದ್ದರು.