ಚಿತ್ರದುರ್ಗ: ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಕೋಟೆನಗರಿಯ ನವದುರ್ಗೆಯರು ಒಳಗೊಂಡು ಜಿಲ್ಲೆಯ ಶಕ್ತಿದೇವತೆ ದೇಗುಲಗಳಲ್ಲಿ ಗುರುವಾರವೂ ವೈವಿಧ್ಯಮಯ ಅಲಂಕಾರ ಸೇವೆ ನೆರವೇರಿತು. ಒಂಬತ್ತನೇ ದಿನವಾದ ಶುಕ್ರವಾರಕ್ಕೂ ವಿಶೇಷ ಪೂಜೆಗಾಗಿ ಭರದ ಸಿದ್ಧತೆಯಲ್ಲಿ ಭಕ್ತರು ತೊಡಗಿದ್ದಾರೆ.
ದಸರಾ ಆರಂಭದಿಂದಲೂ ಸಾವಿರಾರು ಮಹಿಳೆಯರು ಸೂರ್ಯೋದಯಕ್ಕೂ ಮುನ್ನ ಬನ್ನಿ ಮರ, ಬನ್ನಿ ಮಹಾಕಾಳಿ ದೇವಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದ್ದು, ಎಂಟನೇ ದಿನ ಗುರುವಾರವೂ ದೇವಿಯನ್ನು ಶ್ರದ್ಧಾ-ಭಕ್ತಿಯಿಂದ ಆರಾಧಿಸಿ, ಬನ್ನಿ ಮರಗಳ ಮುಂಭಾಗ ದೇವಿ ಮಂತ್ರ ಪಠಿಸಿದರು.
ದುರ್ಗದ ನವದುರ್ಗೆಯರಾದ ಏಕನಾಥೇಶ್ವರಿ, ಬರಗೇರಮ್ಮ, ನಗರ ಮತ್ತು ಕುಂಚಿಗನಾಳ್ ಕಣಿವೆಮಾರಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಗೌರಸಂದ್ರ ಮಾರಮ್ಮ, ಚೌಡೇಶ್ವರಿ, ಬನ್ನಿ ಮಹಾಕಾಳಿ, ಕುಕ್ಕವಾಡೇಶ್ವರಿ ದೇಗುಲಗಳಲ್ಲಿ ದೇವಿ ಮೂರ್ತಿಯನ್ನು ಭಕ್ತರ ಕಣ್ಮನ ಸೆಳೆಯುವಂತೆ ಅರ್ಚಕರು ಅಲಂಕರಿಸಿದ್ದರು. ಉಚ್ಚಂಗಿಯಲ್ಲಮ್ಮ ದೇವಿ ಮೂರ್ತಿಗೆ ಅರಿಶಿನ ಹಚ್ಚಿದ ನೂರಾರು ತೆಂಗಿನ ಕಾಯಿಗಳಿಂದ ಅಲಂಕರಿಸಲಾಗಿತ್ತು.
ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮೀ, ಕೋಟೆ ರಸ್ತೆಯ ಕಾಳಿಕಮಠೇಶ್ವರಿ ದೇವಿಗೆ ಕಾಳಿಮಾತಾ ಮಾದರಿ, ಲಕ್ಷ್ಮೀಸಾಗರದ ತುಳಜಾ ಭವಾನಿ, ಬುರುಜನಹಟ್ಟಿಯ ಬನಶಂಕರಿ, ಬುದ್ಧನಗರದ ರೇಣುಕಾ ಯಲ್ಲಮ್ಮ ಸೇರಿ ಹಲವು ದೇವಿ ದೇಗುಲಗಳಲ್ಲಿ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.
ಮೆದೇಹಳ್ಳಿ ರಸ್ತೆಯ ರಾಮತೀರ್ಥ ಆಶ್ರಮದಲ್ಲೂ ನವರಾತ್ರಿ ಅಂಗವಾಗಿ ಚಾಮುಂಡೇಶ್ವರಿ ದೇವಿ ಮೂರ್ತಿ ಪ್ರತಿಷ್ಠಾಪಿಸಿದ್ದು, ಎಂಟು ದಿನವೂ ವಿಶೇಷ ಪೂಜೆಗಳು ನೆರವೇರಿದವು. ಸಾವಿರಾರು ಭಕ್ತರು ದೇಗುಲಗಳಿಗೆ ಭೇಟಿ ನೀಡಿ ಇಷ್ಟಾರ್ಥ ಈಡೇರಿಕೆಗಾಗಿ ಪ್ರಾರ್ಥಿಸಿಕೊಂಡರು. ಕೆಲವೆಡೆ ಹೋಮ, ಹವನಗಳು ಜರುಗಿತು. ಹಲವೆಡೆ ಮಹಿಳಾ ಭಜನಾ ತಂಡಗಳಿಂದ ಪ್ರಾರ್ಥನೆ, ಭಜನೆ ಜರುಗಿದವು.