ಜಿಲ್ಲೆ

ವೈಯಕ್ತಿಕ ನೋವು, ವ್ಯಕ್ತಿಗತ ದ್ವೇಷ ಬೇಡ

ಶಿವಮೊಗ್ಗ: ವೈಯಕ್ತಿಕ ನೋವು ಮರೆತು, ವ್ಯಕ್ತಿ ಆಧಾರಿತ ದ್ವೇಷ ತೊರೆದು ಪತ್ರಕರ್ತರು ನೈತಿಕತೆಯಿಂದ ತಮ್ಮ ಲೇಖನಿ ಬಳಸಬೇಕಾದ ಅವಶ್ಯಕತೆಯಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸಲಹೆ ನೀಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಂಗಳವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಸಮಾಜವನ್ನು ಎಚ್ಚರಿಸುವ ಜತೆಗೆ ಸೇನಾನಿಗಳಂತೆ ಕೆಲಸ ಮಾಡುತ್ತಿರುವ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕರೊನಾ ಕಾಲಘಟ್ಟದಲ್ಲಿ ಇಡೀ ಜನಸಮೂಹವೇ ತೊಂದರೆಗೆ ಸಿಲುಕಿದೆ. ಪತ್ರಕರ್ತರೂ ಇದಕ್ಕೆ ಹೊರತಲ್ಲ. ಆದರೂ ಕರೊನಾ ಭೀತಿ ತೊರೆದು ಪತ್ರಕರ್ತರು ಕಾರ್ಯನಿರ್ವಹಿಸುತ್ತಿರುವ ಪರಿ ಅನನ್ಯ. ಅಭಿವೃದ್ಧಿ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಪತ್ರಕರ್ತರ ಸ್ಪಂದನೆ ಅತ್ಯವಶ್ಯ ಎಂದರು.

ಕರೊನಾದಲ್ಲಿ ಅಭಿವೃದ್ಧಿ ಪರ್ವ: ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ನಿಲ್ಲಬಾರದು ಎಂಬ ಕಾರಣಕ್ಕೆ ಹಲವು ಯೋಜನೆಗಳು ಸಕಾಲದಲ್ಲಿ ಅನುಷ್ಠಾನಗೊಳಿಸುವಂತೆ ನೋಡಿಕೊಂಡಿದ್ದೇನೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

ಸಕ್ರೆಬೈಲು ಆನೆ ಬಿಡಾರ ಸಮೀಪದ ತುಂಗಾ ನದಿ ದ್ವೀಪವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವುದು, ಅಕ್ಕಮಹಾದೇವಿ ಜನ್ಮಸ್ಥಳ ಉಡುತಡಿಯಲ್ಲಿ ನವದೆಹಲಿಯ ಅಕ್ಷರಧಾಮ ಮಾದರಿಯಲ್ಲಿ ರೂಪಿಸುವ ಗುರಿ ಹೊಂದಿದ್ದೇನೆ. ರಾಗಿಗುಡ್ಡದಲ್ಲಿ ಇಎಸ್​ಐ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿ ವರ್ಷದ ಬಳಿಕ 105 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪತ್ರಕರ್ತರಿಗೆ ಗುರುತಿನ ಚೀಟಿ, ಆಯುಷ್ ಕಿಟ್ ಹಾಗೂ ಎನ್-95 ಮಾಸ್ಕ್ ವಿತರಿಸಲಾಯಿತು. ಹಿರಿಯ ಪತ್ರಕರ್ತರು ಹಾಗೂ ಛಾಯಾಗ್ರಾಹಕರು, ಸಂಪಾದಕರ ರಾಜ್ಯ ಸಂಘದ ನಿರ್ದೇಶಕರನ್ನು ಸನ್ಮಾನಿಸಲಾಯಿತು.

ಪತ್ರಕರ್ತರಿಗೆ ಸರ್ಕಾರ ನೆರವಾಗಲಿ: ಜಿಲ್ಲೆಯಲ್ಲಿ ಪತ್ರಕರ್ತರಿಗೆ ಕರೊನಾ ಸೋಂಕು ತಗುಲಿದರೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ದೊರಕಿಸಬೇಕು. ಕರೊನಾ ಸೇನಾನಿಗಳಿಗೆ ನೀಡುತ್ತಿರುವ ಜೀವ ವಿಮೆ ವ್ಯಾಪ್ತಿಗೆ ಪತ್ರಕರ್ತರನ್ನೂ ಸೇರಿಸಬೇಕು. ವಾಹನಗಳ ಮೇಲೆ ‘ಪ್ರೆಸ್’ ಎಂದು ನಮೂದಿಸಿಕೊಂಡು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಅರ್ಹ ಪತ್ರಕರ್ತರ ವಾಹನಗಳ ದಾಖಲೆ ಪರಿಶೀಲಿಸಿ ಪೊಲೀಸ್ ಇಲಾಖೆಯಿಂದಲೇ ಪ್ರತ್ಯೇಕ ಲೋಗೋ ಒದಗಿಸಬೇಕು ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಎನ್.ರವಿಕುಮಾರ್ ಒತ್ತಾಯಿಸಿದರು.

ಎಸ್ಪಿ ಕೆ.ಎಂ.ಶಾಂತರಾಜು, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಮೇಯರ್ ಸುವರ್ಣಾ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಹಿರಿಯ ವಾರ್ತಾಧಿಕಾರಿ ಶಫಿ ಸಾದುದ್ದೀನ್, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ನಿರ್ದೇಶಕ ಎನ್.ರವಿಕುಮಾರ್ ಉಪಸ್ಥಿತರಿದ್ದರು.

ಪತ್ರಕರ್ತರೂ ಕರೊನಾ ಸೇನಾನಿಗಳು. ಪೊಲೀಸ್ ಇಲಾಖೆಯೊಂದಿಗೆ ಪತ್ರಕರ್ತರ ಸಹಕಾರ ಅಪಾರ. ಕರೊನಾ ಕಾರಣದಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆ ಉದ್ಭವಿಸುವ ಸಾಧ್ಯತೆಗಳಿವೆ. ಹೀಗಾಗಿ ಪತ್ರಕರ್ತರು-ಪೊಲೀಸರು ಒಟ್ಟಾಗಿ ಕೆಲಸ ಮಾಡಬೇಕಿದೆ.

| ಕೆ.ಎಂ.ಶಾಂತರಾಜು, ಎಸ್ಪಿ

ನಗರ ಪಾಲಿಕೆಯಿಂದ ಬಜೆಟ್​ನಲ್ಲಿ ಪತ್ರಕರ್ತರಿಗೆ 15 ಲಕ್ಷ ರೂ. ಕ್ಷೇಮಾಭಿವೃದ್ಧಿ ನಿಧಿ ಮೀಸಲಿರಿಸಲಾಗಿದೆ. ಕರೊನಾದಿಂದ ಸೂಕ್ತ ಮಾರ್ಗಸೂಚಿ ರೂಪಿಸುವುದು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಅಗತ್ಯ ಯೋಜನೆ ರೂಪಿಸಿ ಪತ್ರಕರ್ತರಿಗೆ ನೆರವು ನೀಡಲಾಗುವುದು.

| ಸುವರ್ಣಾ ಶಂಕರ್, ಮೇಯರ್