ಜಿಲ್ಲೆ

ವೈಯಕ್ತಿಕ ಕಾಮಗಾರಿಗೆ ಗ್ರೀನ್ಸಿಗ್ನಲ್

ಬಾಬುರಾವ ಯಡ್ರಾಮಿ ಕಲಬುರಗಿ: ಲಾಕ್ಡೌನ್ನಿಂದಾಗಿ ಕೆಲಸವಿಲ್ಲದೆ ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಡುತ್ತಿರುವ ಕೂಲಿ ಮತ್ತು ಕೃಷಿ ಕಾರ್ಮಿಕರಿಗೆ ನೆರವಾಗುವಂತೆ ಮಹಾತ್ಮಗಾಂಧಿ ಗ್ರಾಮೀಣ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ವೈಯಕ್ತಿಕ ಕೆಲಸಗಳಿಗೆ ಜಿಲ್ಲಾ ಪಂಚಾಯಿತಿ ಗ್ರೀನ್ ಸಿಗ್ನಲ್ ನೀಡಿದೆ. ಇದರಿಂದ ಹಳ್ಳಿಗಳಲ್ಲಿ ಕೆಲಸ ಶುರುವಾಗಿದ್ದು, ಕಾರ್ಮಿಕರಲ್ಲಿ ಆಶಾಭಾವ ಮೂಡಿದೆ.
ಕರೊನಾ ಹಾವಳಿ ಹೆಚ್ಚಿರುವ ಹೊತ್ತಿನಲ್ಲಿ ಜಿಪಂ ಸಿಇಒ ಡಾ.ರಾಜಾ ಪಿ. ಯೋಚನೆಯಂತೆ ಮೊದಲು ರೈತರ ವೈಯಕ್ತಿಕ ಕೆಲಸಗಳಿಗೆ ಆದ್ಯತೆ ಸಿಕ್ಕಿದೆ. 220ಕ್ಕೂ ಹೆಚ್ಚಿನ ಗ್ರಾಪಂ ವ್ಯಾಪ್ತಿಯಲ್ಲಿ 6000ಕ್ಕೂ ಹೆಚ್ಚಿನ ಕಾರ್ಮಿಕರು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಕಳೆದೊಂದು ತಿಂಗಳಿಂದ ಕೆಲಸವಿಲ್ಲದೆ ಕಂಗಾಲಾಗಿದ್ದ ಗ್ರಾಮೀಣ ಜನರ ಮೊಗದಲ್ಲಿ ನಗೆ ಗೆರೆ ಮೂಡಿದ್ದು, ಕೂಲಿಕಾರರು ಮತ್ತು ಶ್ರಮಿಕರು ಕೊಂಚ ನಿರುಮ್ಮಳವಾಗಿದ್ದಾರೆ.
ಕರೊನಾ ಕಟ್ಟಿಹಾಕಲು ಲಾಕ್ಡೌನ್ ಜಾರಿಗೊಂಡಿದ್ದರಿಂದ ಎಲ್ಲ ಚಟುವಟಿಕೆ ಸ್ತಬ್ಧಗೊಂಡಿದ್ದವು. ಸ್ಥಳೀಯರ ಜತೆಗೆ ಗುಳೆ ಹೋಗಿದ್ದವರು ಸಹ ಸಾವಿರಾರು ಸಂಖ್ಯೆಯಲ್ಲಿ ತಮ್ಮೂರಿಗೆ ಮರಳಿದ್ದಾರೆ. ಕೆಲಸವಿಲ್ಲದ್ದರಿಂದ ಕೃಷಿ, ಕೂಲಿ, ಹಮಾಲಿ, ಕಟ್ಟಡ ಕಾರ್ಮಿಕರು ಹೀಗೆ ಸಣ್ಣ-ಪುಟ್ಟ ಕೆಲಸ ಮಾಡಿ ಹೊಟ್ಟೆ ಹೊರೆಯುವವರು ಕಂಗಾಲಾಗಿದ್ದರು. ಈಗ ಅವರೆಲ್ಲರಿಗೂ ಕೆಲಸ ಸಿಗುತ್ತಿದೆ. ಜಿಲ್ಲೆಯಲ್ಲಿ 264 ಗಾಪಂಗಳಿದ್ದು, ಸದ್ಯ 212ಕ್ಕೂ ಹೆಚ್ಚಿನ ಕಡೆ ಕಳೆದೊಂದು ವಾರದಿಂದ ನರೇಗಾ ಕೆಲಸ ಶುರುವಾಗಿದೆ.

ಈ ಕೆಲಸಗಳಿಗಿದೆ ಆದ್ಯತೆ: ನರೇಗಾ ಯೋಜನೆಯಡಿ ವೈಯಕ್ತಿಕ ಕೆಲಸಗಳಿಗೆ ಆದ್ಯತೆ ಇರುವುದರಿಂದ ರೈತರು ತಮ್ಮ ಹೊಲಗಳಲ್ಲಿನ ಕ್ಷೇತ್ರ ಬದು ನಿಮರ್ಾಣ, ಕೃಷಿ ಹೊಂಡ ನಿಮರ್ಾಣ, ಸಸಿ ನೆಡಲು ಮುಂಗಡ ಗುಂಡಿ ತೋಡುವಂಥ ಕೆಲಸ ಕೈಗೆತ್ತಿಕೊಳ್ಳಬಹುದಾಗಿದೆ. ಸಾಮೂಹಿಕವಾಗಿ ಮಾಡಬಹುದಾದ ಕೆರೆ ಮತ್ತು ನಾಲಾ ಹೂಳೆತ್ತುವಿಕೆ, ಗೋಕಟ್ಟಾ ನಿಮರ್ಾಣ ಮೊದಲಾದ ಕೆಲಸಗಳನ್ನು ಮಾಡಬಹುದು. ಆದರೆ ಇಲ್ಲಿ ಕರೊನಾ ಸುರಕ್ಷತಾ ಕ್ರಮ ಪಾಲಿಸಬೇಕು. ಎಲ್ಲರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಎಂದು ಜಿಪಂ ಸಿಇಒ ಡಾ.ರಾಜಾ ಪಿ. ವಿಜಯವಾಣಿಗೆ ತಿಳಿಸಿದ್ದಾರೆ.

ಸೇಡಂ ತಾಲೂಕಿನ ಮಳಖೇಡದಲ್ಲಿ ಕೆರೆ ಹೂಳೆತ್ತುವಿಕೆ, ಕಾಳಗಿ ತಾಲೂಕಿನ ಬೆಡಸೂರದಲ್ಲಿ ಗೋಕಟ್ಟಾ ನಿಮರ್ಾಣ, ಆಳಂದ ತಾಲೂಕಿನ ಕವಲಗಾ ಸೇರಿ 30 ಗ್ರಾಪಂ ವ್ಯಾಪ್ತಿಯಲ್ಲಿ 119 ಕಾಮಗಾರಿ ಶುರುವಾಗಿವೆ. ಅಜಲಪುರ ತಾಲೂಕಿನ 20 ಗ್ರಾಪಂಗಳಲ್ಲಿ 84 ಕಾಮಗಾರಿ ಆರಂಭಿಸಲಾಗಿದೆ. ಚಿಂಚೋಳಿ ತಾಲೂಕಿನ 20 ಗ್ರಾಪಂಗಳಲ್ಲಿ 71, ಚಿತ್ತಾಪುರ ತಾಲೂಕಿನ 30 ಗ್ರಾಪಂಗಳಲ್ಲಿ 206, ಜೇವರ್ಗಿ ತಾಲೂಕಿನ 36 ಗ್ರಾಪಂಗಳಲ್ಲಿ 116, ಕಲಬುರಗಿ ತಾಲೂಕಿನ 33 ಗ್ರಾಪಂ ವ್ಯಾಪ್ತಿಯಲ್ಲಿ 200, ಸೇಡಂ ತಾಲೂಕಿನ 23 ಗ್ರಾಪಂಗಳಲ್ಲಿ 129 ಕೆಲಸ ಪ್ರಗತಿಯಲ್ಲಿದ್ದು, 6 ಸಾವಿರಕ್ಕೂ ಅಧಿಕ ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದಾರೆ.

ನರೇಗಾ ಯೋಜನೆ ಕೆಲಸಗಳನ್ನು ಜಿಲ್ಲೆಯಲ್ಲಿ 212 ಗ್ರಾಪಂಗಳಲ್ಲಿ ಆರಂಭಿಸಲಾಗಿದೆ. ವೈಯಕ್ತಿಕ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ. ಸಮುದಾಯ ಕೆಲಸಗಳನ್ನು ಮಾಡುವ ಕರೊನಾ ಸುರಕ್ಷತೆ ಪಾಲಿಸಲಾಗುತ್ತಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ. ನಿತ್ಯವೂ ಕೂಲಿ ಕಾರ್ಮಿಕರಿಗೆ ಕರೊನಾ ಹಿಮ್ಮೆಟ್ಟಿಸುವ ಪ್ರತಿಜ್ಞಾ ವಿಧಿ ಬೋಧಿಸಲಾಗುತ್ತಿದೆ. ನರೇಗಾದಡಿ ಬೇಡಿಕೆಯಂತೆ ಕೆಲಸ ನೀಡಲಾಗುವುದು.
| ಡಾ.ರಾಜಾ ಪಿ. ಜಿಪಂ ಸಿಇಒ