ಜಿಲ್ಲೆ

ವೈಯಕ್ತಿಕ ಕಾಮಗಾರಿಗಾಗಿ ಅರ್ಜಿ ಸಲ್ಲಿಸಿ

ಸುರಪುರ: ಪ್ರಸಕ್ತ ಸಾಲಿನಲ್ಲಿ ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಾಗಿ ಸ್ಥಳೀಯ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಕಾಮಗಾರಿಗೆ ಬೇಡಿಕೆ ಸಲ್ಲಿಸಬಹುದು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್ ಹೇಳಿದರು.

ನಗರದ ತಾಪಂ ಕಚೇರಿಯಲ್ಲಿ ಸೋಮವಾರ ನರೇಗಾ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸೌಲಭ್ಯದ ಮಾಹಿತಿಯ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಿಂದ ಬಿಡುಗಡೆ ಮಾಡಿದ ಕ್ಯೂಆರ್ ಕೋಡ್ ಸ್ಕಾö್ಯನ್, ಆನ್‌ಲೈನ್ ಲಿಂಕ್ ಮೂಲಕ ಬೇಡಿಕೆ ಸಲ್ಲಿಸಬಹುದು. ೨೦೨೫-೨೬ನೇ ಸಾಲಿನ ಕಾರ್ಮಿಕ ಅಯವ್ಯಯ ತಯಾರಿಸಲು ನ.೨ರವರೆಗೆ ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಜಾಗೃತಿ ಅಭಿಯಾನ ನಡೆಯಲಿದೆ ಎಂದು ಹೇಳಿದರು.

ಗ್ರಾಮೀಣ ಭಾಗದ ರೈತರ ಹಾಗೂ ಕೂಲಿ ಕಾರ್ಮಿಕರ ಆರ್ಥಿಕ ಬಲವರ್ಧನೆಗೆ ನರೇಗಾ ಯೋಜನೆಯಡಿ ದನ, ಕುರಿ, ಮೇಕೆ, ಕೋಳಿ, ಹಂದಿ, ಕ್ಷೇತ್ರ ಬದು, ಕೃಷಿ ಹೊಂಡ, ಎರೆಹುಳು ತೊಟ್ಟಿ, ಕೊಳವೆ ಬಾವಿ ಮರುಪೂರ್ಣ, ತೆಂಗು, ಮಾವು, ಸಪೋಟ, ದಾಳಿಂಬೆ, ಗುಲಾಬಿ, ಮಲ್ಲಿಗೆ, ಸೀಬೆ, ನುಗ್ಗೆ, ಕರಿಬೇವು, ಹುಣಸೆ, ಸೀತಾಫಲ, ನೇರಳೆ, ನೆಲ್ಲಿ, ದಾಕ್ಷಿ, ಡ್ರಾಗನ್ ಫ್ರೂಟ್ ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳು, ರೇಷ್ಮೆ ಹಾಗೂ ಅರಣ್ಯ ಸಸಿಗಳನ್ನು ಬೆಳೆಯಲು ಆರ್ಥಿಕ ನೆರವು ನೀಡಲಾಗುತ್ತದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ಪ್ರತಿ ಅರ್ಹ ಕುಟುಂಬಕ್ಕೆ ತಮ್ಮ ಜೀವಿತಾವಧಿಯಲ್ಲಿ ಗರಿಷ್ಠ ೫ ಲಕ್ಷ ರೂ. ವರೆಗೆ ಯೋಜನೆಯಡಿ ವೈಯಕ್ತಿಕ ಕಾಮಗಾರಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಸಲ್ಲಿಸುವ ವೈಯಕ್ತಿಕ ಕಾಮಗಾರಿ ಬೇಡಿಕೆ ಗ್ರಾಮ ಸಭೆಯಲ್ಲಿ ಅನುಮೋದನೆಗೊಂಡು, ನಿಗದಿತ ಕಾರ್ಮಿಕ ಆಯ ವ್ಯಯದ ಮಿತಿಗೆ ಒಳಪಟ್ಟಿರುತ್ತದೆ. ಯಾವುದೇ ಮಾಹಿತಿ, ಕುಂದುಕೊರತೆ ಹಾಗೂ ನರೇಗಾ ಯೋಜನೆಯ ಅನುಷ್ಠಾನ ಮತ್ತು ದೂರುಗಳಿದ್ದಲ್ಲಿ ಮೊ. ೮೨೭೭೫೦೬೦೦೦ ಏಕೀಕೃತ ಉಚಿತ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಎಂದರು.

ನಮ್ಮ ಮನೆಯ ಬಚ್ಚಲ ನೀರು ಹೊರ ಹರಿದು ಕಾಂಕ್ರೀಟ್ ಚರಂಡಿಯಲ್ಲಿ ನಿಂತು ವಾಸನೆ ಬರುತ್ತದೆ. ಡೆಂಘೆ, ಮಲೇರಿಯಾ, ಚಿಕ್ಯೂನ್ ಗುನ್ಯಾದಂತಹ ಕಾಯಿಲೆ ಬರುವುದನ್ನು ಬಚ್ಚಲ ಗುಂಡಿ ನಿರ್ಮಿಸಿಕೊಂಡರೆ ತಡೆಯಬಹುದು. ಅಲ್ಲದೆ ಗ್ರಾಮದ ಕೆರೆ, ಕಟ್ಟೆ, ಕಾಲುವೆ, ಹಳ್ಳಗಳಿಗೆ ಮನೆ ಬಳಕೆಯ ನೀರು ಸೇರಿ ಕಲುಷಿತವಾಗುವುದು ತಪ್ಪುತ್ತದೆ ಎಂದು ಹೇಳಿದರು.

ತಾಪಂ ಸಿಬ್ಬಂದಿ ಪ್ರಕಾಶ, ವೆಂಕಟೇಶ, ವಿಜಯಕುಮಾರ ಜೋಶಿ ,ಯೋಗೇಶ, ಶರಮುದ್ದೀನ್, ರಾಮನಗೌಡ ಇತರರಿದ್ದರು.