ಮೈಸೂರು: ಮಹಾಯೋಗಿ ವೇಮನ ರಾಜವಂಶಸ್ಥನಾಗಿದ್ದರೂ ಸಾಮಾಜಿಕ ಸಮಾನತೆಗಾಗಿ ವೈಭವಯುತ ಜೀವನವನ್ನು ತ್ಯಾಗ ಮಾಡಿದ ಶ್ರೇಷ್ಠ ದಾರ್ಶನಿಕರಾದರು ಎಂದು ಕೃಷ್ಣರಾಜನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ.ಮೈಸೂರು ಕೃಷ್ಣಮೂರ್ತಿ ಹೇಳಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕಿರುರಂಗಮಂದಿರಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೇಮನ ಅವರು ಸಮಾನತೆ-ಸತ್ಯ ಎಂಬ ತತ್ವವನ್ನು ನೀಡಿದ್ದಾರೆ. ಸಮಾಜವು ನೆಮ್ಮದಿಯಿಂದ ಇರಲು ಈ ಎರಡು ತತ್ವಗಳು ಸಾಕು. ಇದಕ್ಕಿಂತ ನಮಗೆ ಇನ್ನೇನು ಬೇಕು ಎಂದು ಹೇಳಿದರು.
ತೆಲುಗಿನ ವೇಮನ 15ನೇ ಶತಮಾನದ ಪ್ರಮುಖ ಕವಿಗಳಲ್ಲಿ ಒಬ್ಬರು. ರಾಜಮನೆತನದಲ್ಲಿ ಹುಟ್ಟಿದ ವೇಮನ ಜೀವನದ ಸತ್ಯಗಳನ್ನು ಅರಿಯುತ್ತ ಮಹಾಯೋಗಿಯಾದರು. ಅವರ ಜೀವನದ ಆದರ್ಶವನ್ನು ನೆನೆಯಬೇಕಾಗಿದೆ. ಅವರ ಅವರ ತತ್ವಾದರ್ಶಗಳು ಎಲ್ಲರೂ ಪಾಲಿಸುವಂತಾಗಬೇಕು ಎಂದರು.
ಭಾರತ ದೇಶವು ತತ್ವಜ್ಞಾನಿಗಳ ತವರು. ಇಲ್ಲಿ ಹುಟ್ಟಿರುವಂತಹ ತತ್ವಜ್ಞಾನಿಗಳು ಬೇರೆಲ್ಲೂ ಇಲ್ಲ. ಬೇರೆ ಬೇರೆ ಕಾಲಘಟ್ಟಗಳಲ್ಲಿ ಕಾಣಿಸಿಕೊಂಡಿರುವಂತಹ ತತ್ವಜ್ಞಾನಿಗಳು ಈ ದೇಶವನ್ನು ಕಟ್ಟಿ ಬೆಳೆಸುವುದಕ್ಕೆ ಕೊಟ್ಟಿರುವಂತಹ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಜಾತಿಭೇದಗಳನ್ನು ತೊರೆದು, ಬೆಳಕನ್ನು ತರುವಂತಹ ಕಾರ್ಯವನ್ನು ವೇಮನ ಅವರು ಮಾಡಿದ್ದಾರೆ. ತಮ್ಮ ವಿಚಾರಧಾರೆಯೊಂದಿಗೆ ಸಮಾಜವನ್ನು ಪರಿವರ್ತನೆ ಮಾಡುವಂತಹ ಕೆಲಸವನ್ನು ಮಾಡಿದರು ಎಂದರು.
ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು ಮಾತನಾಡಿ, ಎಲ್ಲರೂ ಸಹ ಸಮಾನರು, ಯಾವುದೇ ಜಾತಿ ತಾರತಮ್ಯವಿಲ್ಲದೆ ನಾವೆಲ್ಲರೂ ಒಂದು ಎಂಬುದನ್ನು ನಮಗೆ ತಿಳಿಸಿಕೊಟ್ಟಿರುವ ವೇಮನಂತಹ ಮಹಾನ್ ದಾರ್ಶನಿಕರು ನಮಗೆ ದಾರಿದೀಪವಾಗಿದ್ದಾರೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಯ ಅನುಷ್ಠಾನದ ಪ್ರಾಧಿಕಾರದ ಜ್ಲಿಲಾಧ್ಯಕ್ಷ ಅರುಣ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಬಳಗದ ಅಧ್ಯಕ್ಷ ಡಾ.ಬಿ.ಎಂ ವಾಮದೇವ ಹಾಗೂ ಮತ್ತಿತರರು ಉಪಸ್ಥಿತರಿದ್ದರು.