ಭಾಲ್ಕಿ: ಗಡಿಯಲ್ಲಿ ಕನ್ನಡದ ದೀಪ ಬೆಳಗಿಸಿದ, ನೂತನ ಅನುಭವ ಮಂಟಪದ ರೂವಾರಿ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರ 23ನೆಯ ಸ್ಮರಣೋತ್ಸವ ಮತ್ತು ವಚನ ಜಾತ್ರೆ-2022 ಪಟ್ಟಣದಲ್ಲಿ ಅದ್ದೂರಿ ಹಾಗೂ ವೈಭವದಿಂದ ಆಚರಿಸಲಾಗುತ್ತಿದೆ ಎಂದು ಪಟ್ಟದ್ದೇವರ ಸ್ಮರಣೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಈಶ್ವರ ಖಂಡ್ರೆ ತಿಳಿಸಿದರು.
ಕೋವಿಡ್ ಕಾರಣದಿಂದ ಎರಡು ವರ್ಷ ಪಟ್ಟದ್ದೇವರ ಸ್ಮರಣೋತ್ಸವ ಸರಳ ಆಚರಿಸಲಾಗಿತ್ತು. ಈ ಬಾರಿ ಸೋಂಕಿನ ಆತಂಕ ದೂರ ಆಗಿರುವ ಹಿನ್ನೆಲೆಯಲ್ಲಿ ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ 21 ಮತ್ತು 22ರಂದು ಸ್ಮರಣೋತ್ಸವ, ವಚನ ಜಾತ್ರೆ ಸಂಭ್ರಮದಿಂದ ನಡೆಯಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸ್ವಾಗತ ಸಮಿತಿ ಗೌರವಾಧ್ಯಕ್ಷ, ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಸ್ಮರಣೋತ್ಸವ ಯಶಸ್ಸಿಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಗೊ.ರು.ಚ ಉದ್ಘಾಟನೆ: 21ರಂದು ಸಂಜೆ 4ಕ್ಕೆ ನಾಡೋಜ, ಹಿರಿಯ ಚಿಂತಕ ಗೊ.ರು.ಚನ್ನಬಸಪ್ಪ ಉದ್ಘಾಟಿಸಲಿದ್ದಾರೆ. ಕೌಲಗಾ ಶ್ರೀ ಅಭಿನವ ಷಣ್ಮುಖ ಸ್ವಾಮೀಜಿ ಸೇರಿ ಜಿಲ್ಲೆಯ ವಿವಿಧ ಮಠಾಧೀಶರು ಸಮ್ಮುಖ ವಹಿಸುವರು. ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಅವರನ್ನು ಸನ್ಮಾನಿಸಲಾಗುವುದು ಎಂದು ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾಹಿತಿ ನೀಡಿದರು.
22 ರಂದು ಬೆಳಗ್ಗೆ 7ಕ್ಕೆ ಶ್ರೀ ನಿರಂಜನ ಸ್ವಾಮೀಜಿ, ಶ್ರೀ ಬಸವಲಿಂಗ ಸ್ವಾಮೀಜಿ ಸಮ್ಮುಖದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆಯಿದೆ. ಬೆಳಗ್ಗೆ 10ಕ್ಕೆ ಅನುಭಾವ ಗೋಷ್ಠಿಯಿದ್ದು, ಕೇಂದ್ರ ಸಚಿವ ಭಗವಂತ ಖೂಬಾ ಉದ್ಘಾಟಿಸುವರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಗ್ರಂಥ ಲೋಕಾರ್ಪಣೆ ಮಾಡುವರು. ಎನ್ನೆಸ್ಸೆಸ್ಕೆ ಅಧ್ಯಕ್ಷ ಡಿ.ಕೆ.ಸಿದ್ರಾಮ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಶಾಸಕ ಬಂಡೆಪ್ಪ ಖಾಶೆಂಪುರ, ಸರ್ಕಾರಿ ನೌಕರರ ಸಂಘದ ಸಿ.ಎಸ್.ಷಡಾಕ್ಷರಿ ಇತರರು ಭಾಗವಹಿಸುವರು. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶಕುಮಾರ ಹೊಸಮನಿ ಅವರನ್ನು ಸನ್ಮಾನಿಸಲಾಗುವುದು. ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಡಾ. ರಾಜಶೇಖರ ಮಠಪತಿ ಅನುಭಾವ ಮಂಡಿಸಲಿದ್ದಾರೆ. ಸಂಜೆ 4ಕ್ಕೆ ಕೂಡಲಸಂಗಮ ಬಸವ ಧರ್ಮ ಪೀಠದ ಜಗದ್ಗುರು ಪೂಜ್ಯ ಡಾ.ಗಂಗಾದೇವಿ ಸಾನ್ನಿಧ್ಯದಲ್ಲಿ ಸಮಾರೋಪ ನಡೆಯಲಿದೆ ಎಂದು ವಿವರಿಸಿದರು.
ಎರಡು ದಿನ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮತ್ತು ಶ್ರೀ ಗುರುಬಸವ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ವೈವಿಧ್ಯಮಯ ಕಾರ್ಯಕ್ರಮ ಜರುಗಲಿದ್ದು, ನಾಡಿನ ಪ್ರತಿಷ್ಠಿತ ಮಠಾಧೀಶರು, ರಾಜಕೀಯ ಗಣ್ಯರು, ಸಾಹಿತಿ, ಕಲಾವಿದರು ಭಾಗಿಯಾಗಲಿದ್ದಾರೆ.
|ಈಶ್ವರ ಖಂಡ್ರೆ, ಸ್ವಾಗತ ಸಮಿತಿ ಅಧ್ಯಕ್ಷ
ಸಮಾರಂಭದಲ್ಲಿ ವಿವಿಧ ಸಾಧಕರನ್ನು ಗುರುತಿಸಿ ಹೆಸರಾಂತ ಸಾಧಕರ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. 21ರಂದು ರಾತ್ರಿ 8ಕ್ಕೆ ಸೋರುತಿಹುದು ಸಂಬಂಧ ಮತ್ತು 22ರಂದು ರಾತ್ರಿ 8ಕ್ಕೆ ಅವಿರಳಜ್ಞಾನಿ ಚನ್ನಬಸವಣ್ಣ ನಾಟಕ ಪ್ರದರ್ಶನಗೊಳ್ಳಲಿದೆ.
|ಶ್ರೀ ಗುರುಬಸವ ಪಟ್ಟದ್ದೇವರು, ಹಿರೇಮಠ ಸಂಸ್ಥಾನದ ಪೀಠಾಧಿಪತಿ