ಮಡಿಕೇರಿ: ನಗರದ ಕೆಎಸ್‌ಆರ್‌ಟಿಸಿ ಬಸ್ ಡಿಪೊ ಬಳಿಯ ಶಾಂತಿನಿಕೇತನ ಬಡಾವಣೆಯಲ್ಲಿ ಶಾಂತಿನಿಕೇತನ ಯುವಕ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗೌರಿ, ಗಣೇಶಮೂರ್ತಿಗಳ ವಿಸರ್ಜನೋತ್ಸವ ಶನಿವಾರ ರಾತ್ರಿ ವೈಭವೋಪೇತವಾಗಿ ಜರುಗಿತು.
ಪಡುವಣದಲ್ಲಿ ಸೂರ್ಯ ಅಸ್ತಮಿಸುತ್ತಿದ್ದಂತೆ ಆರಂಭವಾದ ಭವ್ಯ ಶೋಭಾಯಾತ್ರೆಗೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮ ಸಾಕ್ಷಿಯಾಯಿತು. ಚಲನವಲನಗಳನ್ನು ಒಳಗೊಂಡ ಅದ್ದೂರಿ ಮಂಪಟ ಸೂಜಿಗಲ್ಲಿನಂತೆ ಸೆಳೆಯಿತು.
ಲೋಕ ಕಲ್ಯಾಣಕ್ಕಾಗಿ ಮಹಾಗಣಪತಿಯಿಂದ ದೈತ್ಯ ಶತಮಹಿಷಿಯ ಸಂಹಾರ ಕಥಾಹಂದರವನ್ನು ಮಂಟಪದಲ್ಲಿ ಪ್ರದರ್ಶಿಸಲಾಯಿತು. ಪೌರಾಣಿಕ ಹಿನ್ನೆಲೆಯ ಈ ಪ್ರದರ್ಶನವು ಸೂಜಿಗಲ್ಲಿನಂತೆ ಸೆಳೆಯಿತು.
ಶಾಂತಿನಿಕೇತನ ಬಡಾವಣೆ, ಡಿಪೊ ಬಳಿ, ಜನರಲ್ ತಿಮ್ಮಯ್ಯ ವೃತ್ತ, ನಗರ ಪೊಲೀಸ್ ಠಾಣೆ ಮುಂಭಾಗ, ಹಳೇ ಖಾಸಗಿ ಬಸ್‌ನಿಲ್ದಾಣ, ಇಂದಿರಾಗಾಂಧಿ ವೃತ್ತ (ಚೌಕಿ), ಚೌಡೇಶ್ವರಿ ದೇವಾಲಯ ಬಳಿ ಹೀಗೆ ಅನೇಕ ಕಡೆ ಪ್ರದರ್ಶನಗಳು ನಡೆದವು. ವಿವಿಧ ಹಾಡುಗಳಿಗೆ ಯುವಜನರು ಕುಣಿದು ಕುಪ್ಪಳಿಸಿದರು. ಕೇಸರಿ ಧ್ವಜ ಹಿಡಿದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಹೆಜ್ಜೆ ಹಾಕಿದರು.