ಹಳೇಬೀಡು: ಸಮೀಪದ ಹುಲಿಕಲ್ಲು ವೀರಭದ್ರೇಶ್ವರ ಹಾಗೂ ಪುಷ್ಪಗಿರಿ ಮಲ್ಲಿಕಾರ್ಜನ ದೇವರ ಜಾತ್ರೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು
ಬುಧವಾರ ರಾತ್ರಿಯಿಂದ ಗುರುವಾರ ಬೆಳಗ್ಗೆಯ ವರೆಗೆ ಪುಷ್ಪಗಿರಿ ಮಲ್ಲಿಕಾರ್ಜುನ ಸನ್ನಿಧಿಯಲ್ಲಿ ವಿವಿಧ ಉತ್ಸವಗಳು ನಡೆದರೆ, ಗುರುವಾರ ಪ್ರಾತಃಕಾಲದಲ್ಲಿ ಹುಲಿಕಲ್ಲು ವೀರಭದ್ರೇಶ್ವರ ದೇವರ ಕೊಂಡೋತ್ಸವ ಹಾಗೂ ರಥೋತ್ಸವ ಜರುಗಿತು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಭಕ್ತರು ಎರಡೂ ಕಡೆ ನಡೆದ ಜಾತ್ರೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.
ಪುಷ್ಪಗಿರಿ ಮಲ್ಲಿಕಾರ್ಜುನ ದೇಗುಲ:
ಬುಧವಾರ ಮುಸ್ಸಂಜೆ ಮಲ್ಲಿಕಾರ್ಜುನ ಸ್ವಾಮಿ ಲಿಂಗಕ್ಕೆ ಶತರುದ್ರಾಭಿಷೇಕ ನಡೆಸುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು. ಚೀಲನಾಯ್ಕನಹಳ್ಳಿ ಗ್ರಾಮಸ್ಥರು ಬಾಳೆದಿಂಡು ಹಾಗೂ ಕಾಡು ಹೂವಿನ ಮೊಗ್ಗುಗಳಿಂದ ದೇವರನ್ನು ಶೃಂಗರಿಸಿ ಉತ್ಸವ ನಡೆಸಿದರು. ಬಳಿಕ ಸುತ್ತಲಿನ ಹತ್ತು ಹಳ್ಳಿಯ ಗ್ರಾಮಸ್ಥರು ಪಾಳಿ ಪ್ರಕಾರವಾಗಿ ಬಿಲ್ವಪತ್ರೆ ಮಂಟಪೋತ್ಸವ, ಚಿಕ್ಕನಂದಿ, ದೊಡ್ಡನಂದಿ ಉತ್ಸವ , ಗಜಾರೋಹಣ, ಅಶ್ವಾರೋಹಣ ಉತ್ಸವಗಳನ್ನು ನಡೆಸಿದರು. ತಡರಾತ್ರಿ ಪಾರ್ವತಿ-ಪರಮೇಶ್ವರ ಉತ್ಸವ ಮೂರ್ತಿಗಳನ್ನು ಉಯ್ಯಲೆಯಲ್ಲಿ ಕೂರಿಸಿ ವಿಶೇಷ ಪೂಜೆ ನೆರವೇರಿಸಿದ್ದು ಭಕ್ತರ ಕಣ್ಮನ ಸೆಳೆಯಿತು. ಬೆಳಗಿನ ಜಾವ ದೇಗುಲದ ಮುಂದಿನ ಮಹಾದ್ವಾರಕ್ಕೆ ದೊಡ್ಡ ವಸ್ತ್ರವನ್ನು ಕಟ್ಟಿ ಎಣ್ಣೆಯಲ್ಲಿ ಅದ್ದಿ ಪಂಜಿನಿಂದ ಹೊತ್ತಿಸಲಾಯಿತು. ಎಣ್ಣೆಶಾಲೆ ಶಾಸ್ತ್ರದೊಂದಿಗೆ ಜಾತ್ರೋತ್ಸವಕ್ಕೆ ತೆರೆ ಎಳೆಯಲಾಯಿತು.
ಹುಲಿಕಲ್ಲು ವೀರಭದ್ರೇಶ್ವರ ದೇಗುಲ:
ಗೋಣಿಸೋಮನಹಳ್ಳಿ ಸಮೀಪದ ಹುಲಿಕಲ್ ವೀರಭದ್ರೇಶ್ವರ ದೇಗುಲದಲ್ಲಿ ಗುರುವಾರ ಬೆಳಗಿನ ಜಾವ ಸಾವಿರಾರು ಭಕ್ತರ ಸಮ್ಮುಖದಲ್ಲಿ ದೇವರ ಕೊಂಡೋತ್ಸವ ನಡೆಯಿತು. ಬಳಿಕ ಮೂಲ ಉದ್ಭವ ಶಿವಲಿಂಗಕ್ಕೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕಗಳು ಜರುಗಿದ ನಂತರ ವೀರಭದ್ರೇಶ್ವರ ಉತ್ಸವ ಮೂರ್ತಿಯನ್ನು ದೇಗುಲದ ಪ್ರಾಕಾರದಲ್ಲಿ ಮೆರವಣಿಗೆ ಮಾಡಿ ರಥಕ್ಕೆ ಆರೋಹಣ ಮಾಡಲಾಯಿತು. ಶಾಸ್ತ್ರೋಕ್ತ ಪೂಜಾದಿಗಳು ಜರುಗಿದ ಬಳಿಕ ಹರಹರ ಮಹಾದೇವ ಎಂಬ ಘೋಷದೊಂದಿಗೆ ಭಕ್ತರು ರಥವನ್ನು ದೇಗುಲದ ಸುತ್ತ ಎಳೆದು ಸ್ವಸ್ಥಾನಕ್ಕೆ ತಂದು ನಿಲ್ಲಿಸಿದರು.
ಎರಡೂ ದೇಗುಲಗಳಲ್ಲಿ ಜಾತ್ರೆಗೆ ಬಂದ ಭಕ್ತಾದಿಗಳಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾ ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ಧರ್ಮ ಜಾಗೃತಿಗಾಗಿ ದೀಪೋತ್ಸವ :
ಪುಷ್ಪಗಿರಿ ಶ್ರೀ ದೀಪೋತ್ಸವದಂತಹ ಕಾರ್ಯಕ್ರಮಗಳನ್ನು ಮಠದಲ್ಲಿ ಆಯೋಜಿಸುತ್ತಿರುವ ಉದ್ದೇಶ ಜನರಲ್ಲಿ ಧರ್ಮದ ಬಗ್ಗೆ ಜಾಗೃತಿಯನ್ನು ಮೂಡಿಸುವುದಾಗಿದೆ. ಋಣಾತ್ಮಕ ಮನೋಭಾವದಿಂದ ಹೊರಬರಲು ಪ್ರೇರಣೆ ಒದಗಿಸುವುದು ಮಠಾಧೀಶರ ಕರ್ತವ್ಯವೂ ಆಗಿದೆ ಎಂದು ಪು?್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಬುಧವಾರ ರಾತ್ರಿ ಮಠದ ಆವರಣದಲ್ಲಿ ಆಯೋಜಿಸಿದ್ದ ಕಾರ್ತಿಕ ದೀಪೋತ್ಸವದಲ್ಲಿ ಮಾತನಾಡಿ, ಇಲ್ಲಿ 108 ಶಿವಲಿಂಗಗಳನ್ನು ಸ್ಥಾಪನೆ ಮಾಡಲಾಗಿದ್ದು ಸಹಸ್ರಾರು ದೀಪಗಳನ್ನು ಇಂದು ಬೆಳಗಿಸಲಾಗಿದೆ. ಈ ದೀಪಗಳು ಮನುಷ್ಯನ ಅಜ್ಞಾನವನ್ನು ತೊಲಗಿಸಿ ಜ್ಞಾನವನ್ನು ಹೆಚ್ಚಿಸುವ ಬೆಳಕನ್ನು ಬೀರಬೇಕು ಎಂಬುದು ನಮ್ಮ ಅಭಿಲಾಷೆ ಎಂದರು. ಬಳಿಕ 108 ಶಿವಲಿಂಗಗಳಿಗೆ ವಿಶೇಷ ದೀಪಾರಧನೆ ನಡೆಸಲಾಯಿತು. ಶಾಸಕ ಕೆ.ಎಸ್.ಲಿಂಗೇಶ್, ಮುಖಂಡರಾದ ಹುಲ್ಲಹಳ್ಳಿ ಸುರೇಶ್, ಕೊರಟಗೆರೆ ಪ್ರಕಾಶ್, ಎಚ್.ಎಸ್. ರಾಜಶೇಖರ್, ಗಂಗೂರು ಶಿವಕುಮಾರ್, ಮಠದ ಆಡಳಿತಾಧಿಕಾರಿ ಕಿಟ್ಟಪ್ಪ ಮತ್ತಿತರ ಗಣ್ಯರು ಹಾಜರಿದ್ದು ಪೂಜೆಯಲ್ಲಿ ಭಾಗಿಯಾದರು.