ಜಿಲ್ಲೆ

ವೈದ್ಯಾಧಿಕಾರಿ ವಿರುದ್ಧ ಕಿರುಕುಳ ಆರೋಪ

ಹುಬ್ಬಳ್ಳಿ: ಮಹಾನಗರ ಪಾಲಿಕೆ ವೈದ್ಯಾಧಿಕಾರಿ ಡಾ. ಪ್ರಭು ಬಿರಾದಾರ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಗರದ ಫಾರ್ವಸಿಟಿಕಲ್ ಏಜೆನ್ಸಿಗೆ ಸಂಬಂಧಿಸಿದ ಮಹಿಳೆಯೊಬ್ಬರು ಆರೋಪಿಸಿದ್ದರಿಂದ, ಆಕೆಯ ಸಂಬಂಧಿಕರು ಶುಕ್ರವಾರ ರಾತ್ರಿ ಚಿಟಗುಪ್ಪಿ ಆಸ್ಪತ್ರೆಗೆ ಮುತ್ತಿಗೆ ಹಾಕಿದ್ದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

ಏಜೆನ್ಸಿಯ ಮಾಲಕಿ ಸಾವಿತ್ರಿ ಎಂಬವರು 3 ತಿಂಗಳಿಂದ ಪಾಲಿಕೆ ಆಸ್ಪತ್ರೆಗೆ ಮಾಸ್ಕ್, ಸ್ಯಾನಿಟೈಸರ್ ಮತ್ತಿತರ ಸಾಮಗ್ರಿ ಪೂರೈಸುತ್ತಿದ್ದರು. ಅದರ ಬಿಲ್ ಕೇಳಲು ಮಹಿಳೆ ಬಂದಿದ್ದರು. ಆ ವೇಳೆ ವೈದ್ಯಾಧಿಕಾರಿ ‘ಬಿಲ್ ಕೊಡಬೇಕೆಂದರೆ ಲಾಜ್​ಗೆ ಬರಬೇಕು’ ಎಂದು ಹೇಳಿದ್ದರಂತೆ.

ಮಹಿಳೆಯ ಸಂಬಂಧಿಕರು ಆಸ್ಪತ್ರೆಯ ಬಳಿ ಜಮಾಯಿಸಿ, ಡಾ. ಬಿರಾದಾರ ಮೇಲೆ ಹಲ್ಲೆ ನಡೆಸಿದರು. ವೈದ್ಯ ಕೆಟ್ಟದಾಗಿ ನಡೆದುಕೊಂಡಿರುವುದರಿಂದ ಬಂಧಿಸಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಧಾವಿಸಿದ ಎಸಿಪಿ ಶಂಕರ ರಾಗಿ, ಉಪನಗರ ಠಾಣೆ ಇನ್ಸ್​ಪೆಕ್ಟರ್ ಎಸ್.ಕೆ. ಹೊಳೆಣ್ಣವರ ಹಾಗೂ ಸಿಬ್ಬಂದಿ ವೈದ್ಯಾಧಿಕಾರಿಯನ್ನು ವಶಕ್ಕೆ ಪಡೆದು ಕರೆದೊಯ್ದರು. ವೈದ್ಯನ ವಿರುದ್ಧ ಈ ಕುರಿತು ರಾತ್ರಿ 11.30ರವರೆಗೆ ಪ್ರಕರಣ ದಾಖಲಾಗಿರಲಿಲ್ಲ.

ಈ ಮಧ್ಯೆ ವೈದ್ಯ ಕೂಡ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಸಂಬಂಧ ದೂರು ನೀಡಲು ಯೋಚಿಸುತ್ತಿರುವುದಾಗಿ ಹೇಳಿದ್ದಾರೆ.