ವಿಜಯವಾಣಿ ಸುದ್ದಿಜಾಲ ಧಾರವಾಡ
ವೈದ್ಯಕೀಯ ಕ್ಷೇತ್ರದಲ್ಲಿ ಶ್ರಮಿಸಿದ ವೈದ್ಯರಿಗೆ ನಗರದ ಕಲಾ ಸ್ಪಂದನದ ನೀಡುವ ವೈದ್ಯಶ್ರೀ ಪ್ರಶಸ್ತಿಗೆ ಈ ಬಾರಿ ಗದಗ ಜಿಲ್ಲೆ ಸಂಕನೂರ ಆಸ್ಪತ್ರೆಯ ಅರವಳಿಕೆ ತಜ್ಞೆ, ತೀವ್ರ ನಿಗಾ ಘಟಕದ ಮುಖ್ಯಸ್ಥೆ ಡಾ. ಶ್ವೇತಾ ಸಂಕನೂರ ಆಯ್ಕೆ ಆಗಿದ್ದಾರೆ. 2023ನೇ ಸಾಲಿನ ಪ್ರಶಸ್ತಿಯನ್ನು ನೀಡಲು ಆಯ್ಕೆ ಸಮಿತಿ ಅಧ್ಯಕ್ಷರು, ವೈದ್ಯ ಡಾ. ಸತ್ಯನಾರಾಯಣ ಮಾಸ್ತಮ್ಮನವರ ಆಯ್ಕೆ ಸಮಿತಿ ತಿರ್ಮಾನಿಸಿದೆ ಎಂದು ಕಲಾ ಸ್ಪಂದನ ಅಧ್ಯಕ್ಷ ಡಾ. ವಿ.ಎಸ್.ವಿ. ಪ್ರಸಾದ ತಿಳಿಸಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಹಿರೇಬಾಸೂರ ಗ್ರಾಮದ ಮೌನೇಶಪ್ಪ ಕತ್ತಿ ಅವರ ಪುತ್ರರು 2019ರಲ್ಲಿ ಈ ಪ್ರಶಸ್ತಿ ಸ್ಥಾಪಿಸಿದ್ದಾರೆ. ಪ್ರಶಸ್ತಿಯು 25,000 ಸಾವಿರ ರೂ. ನಗದು, ಪ್ರಮಾಣಪತ್ರ ಒಳಗೊಂಡಿದೆ.
ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಕಲಾ ಸ್ಪಂದನದ ಅಧ್ಯಕ್ಷ ಡಾ. ವಿ.ಎಸ್.ವಿ. ಪ್ರಸಾದ, ಡಾ. ಸತ್ಯನಾರಾಯಣ ಮಾಸ್ತಮ್ಮನವರ, ನಾರ್ಥ ಬೆಂಗಳೂರು ಹಾಸ್ಪಿಟಲ್ ನಿರ್ದೇಶಕ ಡಾ. ಶಿವಕುಮಾರ ಉಪ್ಪಳ, ಕಲಾ ಸ್ಪಂದನದ ಮಾರ್ತಾಂಡಪ್ಪ ಕತ್ತಿ ಮತ್ತು ಪ್ರಶಸ್ತಿ ಸಂಸ್ಥಾಪಕ ಮಂಜುನಾಥ ಎಂ.ಕೆ. ಸದಸ್ಯರಾಗಿದ್ದಾರೆ.
ಡಾ. ಶ್ವೇತಾ ಪ್ರಕಾಶ ಸಂಕನೂರ ಅವರು ಗದಗ ಜಿಲ್ಲೆಯ ಸಂಕನೂರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಂಸ್ಥಾಪಕರು. ಅರವಳಿಕೆ ತಜ್ಞರು ಹಾಗೂ ತೀವ್ರ ನಿಗಾ ಘಟಕದ ಮುಖ್ಯಸ್ಥರಾಗಿ ಕಾರ್ಯನಿವಹಿಸುತ್ತಿದ್ದಾರೆ. ಇವರು ವಿಶೇಷವಾಗಿ ತೀವ್ರ ಮತ್ತು ತುರ್ತು ಆರೋಗ್ಯದ ಆರೈಕೆಯಲ್ಲಿ ಪರಿಣಿತರಾದವರು. ರೋಗಿಯ ಸ್ಥಿತಿ ಮತ್ತು ಚಿಕಿತ್ಸೆ, ಕಾಳಜಿಯೊಂದಿಗೆ ಮೇಲ್ವಿಚಾರಣೆ ಮಾಡುವುದು ಇವರ ವೈಶಿಷ್ಟೃ. ಹಲವಾರು ಗೌರವ ಪೆಲೋಷಿಪ್‌ಗೆ ಇವರ ಬರಹಗಳು ಆಯ್ಕೆಯಾಗಿವೆ. ಕ್ರಿಟಿಕಲ್ ಕೇರನ ವೈದ್ಯಕೀಯ ಸೇವೆ ಪರಿಗಣಿಸಿ ಹಲವಾರು ಪುರಸ್ಕಾರ ಬಂದಿವೆ.