ಜಿಲ್ಲೆ

ವೈದ್ಯರು ವೃತ್ತಿಪಾವಿತ್ರ‍್ಯಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಲಿ

ಕಾಗವಾಡ: ವೈದ್ಯಕೀಯ ಕ್ಷೇತ್ರ ವ್ಯಾಪಾರೀಕರಣಗೊಂಡಿದ್ದು, ವೈದ್ಯರು ಮತ್ತು ರೋಗಿಗಳ ಸಂಬಂಧ ಮೊದಲಿನಂತೆ ಉಳಿದಿಲ್ಲ. ವೈದ್ಯರು ರೋಗಿಯನ್ನು ನಿಸ್ವಾರ್ಥದಿಂದ ಆರೈಕೆ ಮಾಡಬೇಕು ಎಂದು ಹಿರಿಯ ಪತ್ರಕರ್ತ ಚಿಂತಾಮಣಿರಾವ ಸಹಸ0ಬುದ್ಯ ಹೇಳಿದರು.

ಸಾಂಗಲಿ ನಗರದ ಖರೆ ಕ್ಲಬ್ ಹೌಸ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಿರಜ್ ಪಟ್ಟಣದ ಸಮರ್ಥ ನ್ಯೂರೋ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ೭ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ವೈದ್ಯರ ಮೇಲೆ ರೋಗಿಗೆ ವಿಶ್ವಾಸ ಮತ್ತು ಶ್ರದ್ಧೆ ಇದ್ದಾಗ ಮಾತ್ರ ಬೇಗ ಗುಣಮುಖರಾಗಲು ಸಾಧ್ಯ. ನಿಸ್ವಾರ್ಥ ಸೇವೆ ಮಾಡುವುದರೊಂದಿಗೆ ವೈದ್ಯ ವೃತ್ತಿಯ ಪಾವಿತ್ರತೆ ಕಾಪಾಡಿಕೊಳ್ಳಬೇಕು. ನಿಸ್ವಾರ್ಥ ಸೇವೆ ಸಲ್ಲಿಸುವುದರಲ್ಲಿ ಸಮರ್ಥ ಆಸ್ಪತ್ರೆಯ ಡಾ. ರವೀಂದ್ರ ಪಾಟೀಲ ಒಬ್ಬರಾಗಿದ್ದಾರೆ ಎಂದರು.

೧೦೦ ಬೆಡ್‌ಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಕಳೆದ ೭ ವರ್ಷಗಳ ಹಿಂದೆ ಬಾಡಿಗೆ ಕಟ್ಟಡದಲ್ಲಿ ಕೇವಲ ನ್ಯೂರೋ ಆಸ್ಪತ್ರೆಯಿಂದ ಪ್ರಾರಂಭಗೊಂಡ ಸಮರ್ಥ ಆಸ್ಪತ್ರೆ ಇಂದು ೧೦೦ ಬೆಡ್‌ಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಹೊರಹೊಮ್ಮಿದೆ. ರೋಗಿಗಳು, ಡಾ. ರವೀಂದ್ರ ಪಾಟೀಲ ಅವರ ಮೇಲೆ ಇಟ್ಟಿರುವ ಶ್ರದ್ಧೆ ಮತ್ತು ನಂಬಿಕೆ ಇದಕ್ಕೆ ಮೂಲ ಕಾರಣ. ಮುಂದೆ ಸಾವಿರ ಬೆಡ್‌ಗಳ ಆಸ್ಪತ್ರೆಯಾಗಿ ರೋಗಿಗಳ ಪಾಲಿಗೆ ವರದಾನವಾಗಲಿ ಎಂದು ಶುಭ ಕೋರಿದರು.

ಎಪಿಐ ಸಂದೀಪ ಶಿಂಧೆ, ಉದ್ಯೋಗಪತಿ ಸುಶೀಲ ಹಡದಾರೆ, ಸಲಗರೆ ಗ್ರಾಪಂ ಅಧ್ಯಕ್ಷ ತಾನಾಜಿ ಪಾಟೀಲ ಮಾತನಾಡಿ, ಸಮರ್ಥ ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳ ಪೈಕಿ ಶೇ.೫೮ ರೋಗಿಗಳು ಪುನರ್ಜನ್ಮ ಪಡೆದುಕೊಂಡಿದ್ದಾರೆ. ಇಲ್ಲಿಯ ವೈದ್ಯರ ಕರ್ತವ್ಯ ಪ್ರಜ್ಞೆ ಇದಕ್ಕೆ ಸಾಕ್ಷಿಯಾಗಿದೆ ಎಂದರು.

ಆಸ್ಪತ್ರೆಯ ನೂತನ ಮಾಸ್ ಕ್ಯಾಜುಲಿಟಿ ವಾರ್ಡ್ ನ್ನು ಡಿಜಿಟಲ್ ಮೂಲಕ ಉದ್ಘಾಟನೆ ನೆರವೇರಿಸಲಾಯಿತು.

ಸ್ನೇಹಬಂಧು ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ನಿನಾ ಜೋಶಿ ಅವರಿಗೆ ಸಮರ್ಥ ಆಸ್ಪತ್ರೆಯಿಂದ ಕೊಡಮಾಡುವ `ಸಮರ್ಥ ಸಾಂಗಲಿಕರ' ಪುರಸ್ಕಾರ ನೀಡಿ, ಗೌರವಿಸಲಾಯಿತು.

ಸಮರ್ಥ ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ. ರವೀಂದ್ರ ಪಾಟೀಲ, ಬಾಲರೋಗ ತಜ್ಞ ಡಾ. ಶಿಲ್ಪಾ ಪಾಟೀಲ ಸೇರಿ ಸಮರ್ಥ ಆಸ್ಪತ್ರೆಯ ಎಲ್ಲ ವೈದ್ಯರು, ಸಿಬ್ಬಂದಿ ಹಾಗೂ ಗಣ್ಯರು ಹಾಜರಿದ್ದರು.