ಎಚ್.ಡಿ.ಕೋಟೆ: ಮರಣೋತ್ತರ ಪರೀಕ್ಷೆ ನಡೆಸಲು ಮುಂದಾಗದ ವೈದ್ಯರನ್ನು ಶಾಸಕ ಅನಿಲ್ ಚಿಕ್ಕಮಾದು ಬುಧವಾರ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ತರಾಟೆ ತೆಗೆದುಕೊಂಡರು.
ಬುಧವಾರ ಬೆಳಗ್ಗೆ ತಾಲೂಕಿನ ಹಿರೇಹಳ್ಳಿ ಬಿ.ಕಾಲನಿ ಗ್ರಾಮದ ಕರೀಗೌಡರ ಮಗ ನಾಗೇಶ (40) ಹಾಗೂ ಇದೇ ಗ್ರಾಮದ ನಾಗೇಗೌಡರ ಮಗ ಪುಟ್ಟೇಗೌಡ ಇಬ್ಬರ ನಡುವೆ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿತ್ತು. ಈ ಸಂದರ್ಭದಲ್ಲಿ ನಾಗೇಶನ ಎದೆಗೆ ಪುಟ್ಟೇಗೌಡ ಕೈಯಿಂದ ಗುದ್ದಿದ್ದ. ಹಾಗಾಗಿ ನಾಗೇಶ ಸ್ಥಳದಲ್ಲೇ ಕುಸಿದು ಬಿದ್ದ. ಈ ಕಾರಣ ಮೃತನ ಸಂಬಂಧಿಕರು ಪುಟ್ಟೇಗೌಡ ಹೊಡೆದು ಸಾಯಿಸಿದ್ದಾನೆ ಎಂದು ಆರೋಪಿಸಿ ಅಂತರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶವ ಕೊಂಡೊಯ್ದರು.
ಮರಣೋತ್ತರ ಪರೀಕ್ಷೆ ನಡೆಸುವಂತೆ ಪೊಲೀಸರು ಹಾಗೂ ಮೃತನ ಸಂಬಂಧಿಕರು ಕರ್ತವ್ಯನಿರತ ವೈದ್ಯ ಅರಿವಳಿಕೆ ತಜ್ಞ ಡಾ.ಕಿರಣ್‌ಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು. ವೈದ್ಯರು ನನಗೆ ತುರ್ತು ಘಟಕದಲ್ಲಿ ಕರ್ತವ್ಯವಿದ್ದು ನಾನು ಮರಣೋತ್ತರ ಪರೀಕ್ಷೆ ನಡೆಸುವುದಿಲ್ಲ ಎಂದು ಹೇಳಿದರು ಎಂಬ ಕಾರಣಕ್ಕೆ ಸಂಬಂಧಿಕರು ಆಸ್ಪತ್ರೆ ಆವರಣದಲ್ಲಿ ವೈದ್ಯರ ವಿರುದ್ಧ ಗಲಾಟೆ ನಡೆಸಿದರು.
ವಿಚಾರ ತಿಳಿದು ಶಾಸಕ ಅನಿಲ್ ಚಿಕ್ಕಮಾದು ಆಸ್ಪತ್ರೆ ಶವಾಗಾರಕ್ಕೆ ಭೇಟಿ ನೀಡಿದರು. ಮರಣೋತ್ತರ ಪರೀಕ್ಷೆ ಮಾಡಲು ಏಕೆ ಮುಂದಾಗಿಲ್ಲ ಎಂದು ವೈದ್ಯರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ವೈದ್ಯ ಪೊಲೀಸರು ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ನೀಡಿದ್ದರಿಂದ ಅಸ್ವಾಭಾವಿಕ ಸಾವಿಗೆ ಸಂಬಂಧಿಸಿದಂತೆ ಅದಕ್ಕೆ ಸಂಬಂಧಿಸಿದ ವೈದ್ಯರು ಬಂದ ಮರಣೋತ್ತರ ಪರೀಕ್ಷೆ ನಡೆಸಬೇಕು. ಹಾಗಾಗಿ ನಾನು ಮಾಡಲು ಬರುವುದಿಲ್ಲ ಎಂದು ಉತ್ತರಿಸಿದರು.
ಇದಕ್ಕೆ ಸಮಾಧಾನಗೊಳ್ಳದ ಶಾಸಕ ಈ ಮಾಹಿತಿಯನ್ನಾದರೂ ಮೃತನ ಸಂಬಂಧಿಕರಿಗೆ ನೀಡಬಹುದಾಗಿತ್ತು. ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ನೀಡಿ ಸ್ಪಂದಿಸದ ಕಾರಣ ನಿಮ್ಮನ್ನು ಸೇವೆಯಿಂದ ಅಮಾನತು ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿ ಹೊರ ನಡೆದರು.
ನಂತರ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸೋಮಣ್ಣ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಪೊಲೀಸರು ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡಿದರು.