ಜಿಲ್ಲೆ

ವೈದ್ಯರ ಸಲಹೆ, ಸೂಚನೆ ಪಾಲಿಸಿದರೆ ರೋಗ ತಡೆಗಟ್ಟಬಹುದು: ರವಿ ನಾಕಲಗೂಡು ಸಲಹೆ

ಹಾಸನ: ವೈದ್ಯರ ಸಲಹೆ, ಸೂಚನೆಗಳನ್ನು ಪಾಲಿಸುವುದರಿಂದ ಹಿಮೋಫಿಲಿಯಾ ರೋಗವನ್ನು ತಡೆಗಟ್ಟಬಹುದಾಗಿದೆ ಎಂದು ಹಿರಿಯ ಪತ್ರಕರ್ತ ರವಿ ನಾಕಲಗೂಡು ಹೇಳಿದರು.

ನಗರದ ಭಾರತೀಯ ಶಿಶು ವೈದ್ಯಕೀಯ ಸಂಘದ ಆವರಣದಲ್ಲಿ ತವರು ಚಾರಿತ್ರಿಬಲ್ ಟ್ರಸ್ಟ್, ಇಂಟಾಸ್ ಫೌಂಡೇಶನ್, ಹಿಮೋಫಿಲಿಯಾ ಸೊಸೈಟಿ, ಭಾರತೀಯ ಶಿಶು ವೈದ್ಯಕೀಯ ಸಂಘದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಹಿಮೋಫಿಲಿಯಾ ದಿನಾಚರಣೆ ಹಾಗೂ ಉಚಿತ ಫ್ಯಾಕ್ಟರ್ ವಿತರಣೆ ಮತ್ತು ಇನ್ಹೆಬೀಟರ್ ರಕ್ತ ಪರೀಕ್ಷೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹಿಮೋಫಿಲಿಯಾ ರೋಗವು ಸಾಕಷ್ಟು ಹರಡುತ್ತಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದರು.

ಪ್ರತಿಯೊಬ್ಬರೂ ಕೂಡ ಇಂತಹ ರೋಗದ ಬಗ್ಗೆ ಸಾಕಷ್ಟು ಜಾಗರೂಕತೆ ವಹಿಸಬೇಕು ಮತ್ತು ತಪ್ಪದೇ ತಜ್ಞ ವೈದ್ಯರನ್ನು ಭೇಟಿ ಮಾಡಿ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಇದರ ಜತೆಗೆ ಇಂತಹ ರೋಗಗಳ ಬಗ್ಗೆ ಸಾರ್ವಜನಿಕರಿಗೆ ಸಾಕಷ್ಟು ಅರಿವು ಮೂಡಿಸಬೇಕು. ಡಾ.ಪಾಲಾಕ್ಷ ಅವರ ನೇತೃತ್ವದಲ್ಲಿ ಜಿಲ್ಲಾಧ್ಯಕ್ಷರೊಂದಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಮಕ್ಕಳ ತಜ್ಞ ಹಾಗೂ ಭಾರತೀಯ ಶಿಶು ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ ಬಿ.ದಿನೇಶ್ ಮಾತನಾಡಿ, ವಿಶ್ವ ಹಿಮೋಫಿಲಿಯಾ ದಿನಾಚರಣೆ ಅಂಗವಾಗಿ ಒಂದು ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಹಿಮೋಫಿಲಿಯಾ ಒಂದು ಆನುವಂಶಿಕ ರಕ್ತಸ್ರಾವದ ಕಾಯಿಲೆ. ಅಂದರೆ ಇದು ಪೋಷಕರಿಂದ ಅವರ ಮಕ್ಕಳಿಗೆ ಹರಡುವ ರೋಗ. ನಿಮಗೆ ಹಿಮೋಫಿಲಿಯಾ ಇದ್ದರೆ, ನಿಮ್ಮ ರಕ್ತ ಸರಿಯಾಗಿ ಹೆಪ್ಪುಗಟ್ಟುವುದಿಲ್ಲ. ಇದು ರಕ್ತಸ್ರಾವಕ್ಕೆ ಕಾರಣವಾಗಬಹುದು. ಇದನ್ನು ನಿಯಂತ್ರಿಸಲು ಕಷ್ಟವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಇಂಟಾಸ್ ಫೌಂಡೇಶನ್ ನಾರಾಯಣಮೂರ್ತಿ, ಆಕಾಂಕ್ಷಾ, ಹಿಮೋಫಿಲಿಯಾ ಸೊಸೈಟಿಯ ಅಧ್ಯಕ್ಷ ಕೆ.ಹರೀಶ್ ಕಾರ್ಯದರ್ಶಿ ಡಾ. ಪಾಲಾಕ್ಷ ಸೇರಿದಂತೆ ಇತರರಿದ್ದರು.