ಜಿಲ್ಲೆ

ವೈದ್ಯರ ವರದಿ ವೈಜ್ಞಾನಿಕವಾಗಿರಲಿ: ಉಪಲೋಕಾಯುಕ್ತ ನ್ಯಾ ಫಣೀಂದ್ರ

ಮೈಸೂರು: ವೈದ್ಯಕೀಯ ವರದಿಯ ಆಧಾರದ ಮೇಲೆ ನ್ಯಾಯಾಲಯದ ತೀರ್ಪು ಇರುತ್ತದೆ. ಆದ್ದರಿಂದ ವೈದ್ಯರ ವರದಿ ಪ್ರಾಮಾಣಿಕ ಮತ್ತು ನಿಖರವಾಗಿ ಇರಬೇಕು ಎಂದು ಉಪಲೋಕಾಯುಕ್ತ ನ್ಯಾ.ಕೆ.ಎನ್. ಫಣೀಂದ್ರ ಹೇಳಿದರು.

ನಗರದ ಜೆಎಸ್‌ಎಸ್ ಔಷಧ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ಮೆಡಿಕೋ ಲೀಗಲ್ ಸೊಸೈಟಿಯ 30ನೇ ರಾಜ್ಯ ಮಟ್ಟದ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದರು. ಪ್ರಕರಣದಲ್ಲಿ ನ್ಯಾಯಾಧೀಶರೇ ಎಲ್ಲವನ್ನೂ ನಿರ್ಧರಿಸಲು ಸಾಧ್ಯವಿಲ್ಲ. ನ್ಯಾಯಾಧೀಶರು ತನಿಖಾಧಿಕಾರಿ, ವೈದ್ಯಾಧಿಕಾರಿ ಮತ್ತು ಸೈಬರ್ ತಜ್ಞರ ಅಭಿಪ್ರಾಯ ಕೇಳಬೇಕಾಗುತ್ತದೆ. ಕೆಲವು ಪ್ರಕರಣಗಳಲ್ಲಿ ತನಿಖಾಧಿಕಾರಿಯಷ್ಟೇ ಜವಾಬ್ದಾರಿ ವೈದ್ಯಾಧಿಕಾರಿ, ವೈದ್ಯರ ಮೇಲೂ ಇರುತ್ತದೆ. ಎಲ್ಲ ವೃತ್ತಿಯೂ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿಂದ ಕೂಡಿರಬೇಕು. ಇಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಕೊಡಬಾರದು. ವೈದ್ಯರ ವರದಿ ವೈಜ್ಞಾನಿಕವಾಗಿ ಇರಬೇಕು ಎಂದು ತಿಳಿಸಿದರು.

ಭ್ರಷ್ಟಾಚಾರ ಈಗ ಎಲ್ಲೆಡೆ ಹರಡಿದೆ. ನಾವು ವಿವಿಧ ವೈದ್ಯಕೀಯ ಪ್ರಮಾಣಪತ್ರ ನೋಡಿದ್ದು, ರಸ್ತೆ ಅಪಘಾತ ಪ್ರಕರಣದಲ್ಲಿ ವಾಹನಗಳಿಗೆ ಏನೂ ಆಗಿರುವುದಿಲ್ಲ. ಆದರೆ, ವ್ಯಕ್ತಿಗೆ ಹಲವು ಗಾಯಗಳಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿರುತ್ತದೆ. ಆಗ ಚಿಕಿತ್ಸಾ ವೆಚ್ಚವನ್ನು ಭರಿಸಬೇಕಾಗುತ್ತದೆ. ಇಂತಹ ಅನೇಕ ಉದಾಹರಣೆಗಳು ಸಿಗುತ್ತವೆ ಎಂದರು.

ಕಾನೂನು ಎಲ್ಲರಿಗೂ ಬದುಕುವ ಹಕ್ಕನ್ನು ನೀಡಿದೆ. ಕಾನೂನಿನಡಿ ನಾವು ಸುರಕ್ಷಿತವಾಗಿ ಜೀವಿಸುವ ಜತೆಗೆ, ನಮ್ಮ ಆಸ್ತಿಯನ್ನು ಸುರಕ್ಷಿತವಾಗಿ ಇಟ್ಟಿಕೊಳ್ಳಬೇಕಾಗುತ್ತದೆ. ಸಂಪಾದಿಸಿದ ಆಸ್ತಿಯ ಜತೆಗೆ ನಮ್ಮ ದೇಹವೂ ಒಂದು ಆಸ್ತಿ ಎಂಬುದನ್ನು ಮರೆಯಬಾರದು. ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯ ಬಹಳ ಮುಖ್ಯ. ಇದನ್ನು ಸಂರಕ್ಷಿಸುವ ಹೊಣೆಗಾರಿಕೆ ವೈದ್ಯರ ಮೇಲಿದೆ ಎಂದರು.


ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಕುಲಪತಿ ಡಾ.ಸುರೀಂದರ್ ಸಿಂಗ್, ಕುಲಸಚಿವ ಪ್ರೊ.ಬಿ.ಮಂಜುನಾಥ್, ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಬಸವನಗೌಡಪ್ಪ, ಡಾ.ಎಚ್.ವಿ. ಚಂದ್ರಕಾಂತ್ ಮತ್ತು ಡಾ.ಎಂ. ಅರುಣ್ ಇನ್ನಿತರರು ಪಾಲ್ಗೊಂಡಿದ್ದರು.